ಬೆಳ್ತಂಗಡಿ : ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು 2026ರ ಜುಲೈ 27ರಂದು ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (Eco Sensitive Area – ESA) ಎಂದು ಘೋಷಿಸುವ ಸಂಬಂಧ ಕರಡು ಅಧಿಸೂಚನೆ ಪ್ರಕಟಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು ಹಾಗೂ ಅಭಿಪ್ರಾಯಗಳನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.
ಕರಡು ಅಧಿಸೂಚನೆಯು ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಹಲವು ಗ್ರಾಮಗಳ ಭೂಮಿ, ಕೃಷಿ ಚಟುವಟಿಕೆಗಳು, ಮನೆ ನಿರ್ಮಾಣ, ರಸ್ತೆ ಸೇರಿದಂತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಈ ಕುರಿತು ಸಾರ್ವಜನಿಕರ ಅಭಿಪ್ರಾಯಗಳು ಅತ್ಯಂತ ಮಹತ್ವದ್ದಾಗಿವೆ ಎಂದು ಅವರು ತಿಳಿಸಿದ್ದಾರೆ.
ಶಾಸಕ ಹರೀಶ್ ಪೂಂಜ ಮಾತನಾಡಿ, “ಈ ವಿಚಾರವನ್ನು ಕೇವಲ ಕೇಂದ್ರ ಸರ್ಕಾರದ ಜವಾಬ್ದಾರಿ ಎಂದು ರಾಜ್ಯ ಸರ್ಕಾರ ಕೈಕಟ್ಟಿ ಕುಳಿತುಕೊಳ್ಳಬಾರದು. ಪಶ್ಚಿಮ ಘಟ್ಟ ವ್ಯಾಪ್ತಿಯ ಜನರ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ಹಾಗೂ ದೃಢವಾದ ನಿಲುವು ತಾಳಬೇಕು” ಎಂದು ಒತ್ತಾಯಿಸಿದರು.
ರೈತರು, ಭೂಮಾಲೀಕರು ಹಾಗೂ ಗ್ರಾಮೀಣ ಜನರ ಬದುಕಿಗೆ ಧಕ್ಕೆಯಾಗುವ ಯಾವುದೇ ಅಂಶಗಳು ಕರಡು ಅಧಿಸೂಚನೆಯಲ್ಲಿ ಇದ್ದರೆ, ಅವುಗಳನ್ನು ರಾಜ್ಯ ಸರ್ಕಾರ ಸ್ಪಷ್ಟವಾಗಿ ವಿರೋಧಿಸಿ, ಜನರ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಬಲವಾದ ಆಕ್ಷೇಪಣೆ ಸಲ್ಲಿಸುವ ಜವಾಬ್ದಾರಿ ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸ್ಥಳೀಯರ ಹಕ್ಕುಗಳ ಪರವಾಗಿ ತಾವು ನಿರಂತರವಾಗಿ ಧ್ವನಿ ಎತ್ತುತ್ತಿದ್ದು, ಮುಂದೆಯೂ ಜನವಿರೋಧಿ ಯಾವುದೇ ಕ್ರಮವನ್ನು ವಿರೋಧಿಸುವುದಾಗಿ ತಿಳಿಸಿದ ಅವರು, ಈ ವಿಷಯದಲ್ಲಿ ರಾಜಕೀಯ ಭೇದ ಮರೆತು ಎಲ್ಲರೂ ಜನರ ಪರವಾಗಿ ಒಂದಾಗಬೇಕು ಎಂದು ಕರೆ ನೀಡಿದರು.
60 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸಲು ಮನವಿ
ಕರಡು ಅಧಿಸೂಚನೆ ಪ್ರಕಟವಾದ ದಿನಾಂಕದಿಂದ 60 ದಿನಗಳೊಳಗೆ ಸಾರ್ವಜನಿಕರು ತಮ್ಮ ಆಕ್ಷೇಪಣೆಗಳು, ಸಲಹೆಗಳು ಹಾಗೂ ಅಭಿಪ್ರಾಯಗಳನ್ನು ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಸಲ್ಲಿಸುವಂತೆ ಶಾಸಕರು ಮನವಿ ಮಾಡಿದ್ದಾರೆ.
ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ:
ಕಾರ್ಯದರ್ಶಿಗಳು,
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ,
ಇಂದಿರಾ ಪರಿಸರ ಭವನ, ಜೋರ್‌ಬಾಗ್,
ನವದೆಹಲಿ – 110003.
ಇ-ಮೇಲ್: esz-mef@nic.in
ಪಶ್ಚಿಮ ಘಟ್ಟ ವ್ಯಾಪ್ತಿಯ ಜನರ ಭೂಮಿ, ಬದುಕು ಹಾಗೂ ಸಾಂಪ್ರದಾಯಿಕ ಹಕ್ಕುಗಳ ರಕ್ಷಣೆಗೆ ತಾವು ಸದಾ ಬದ್ಧರಾಗಿದ್ದು, ರಾಜ್ಯ ಸರ್ಕಾರವೂ ಜನರ ಪರವಾಗಿ ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿ ಒತ್ತಡ ಹೇರಿ ಕರಡು ಅಧಿಸೂಚನೆಯಲ್ಲಿರುವ ಜನವಿರೋಧಿ ಅಂಶಗಳನ್ನು ಕೈಬಿಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಹರೀಶ್ ಪೂಂಜ ಆಗ್ರಹಿಸಿದ್ದಾರೆ.

