ಹೆಬ್ರಿ: ಮಾರಾಳಿಯಲ್ಲಿ ನೂತನ ಶಿಲಾಮಯ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ದೇವಸ್ಥಾನ ಮತ್ತು ಬ್ರಹ್ಮಬೈದರ್ಕಳ, ಶಿವರಾಯ ಸ್ವಾಮಿ ಗರಡಿಯ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಿದ್ಧತೆ ಬರದಿಂದ ಸಾಗುತ್ತಿದೆ. ಕೊಕ್ಕರ್ಣಿ ಬ್ರಹ್ಮಾವರ ತಾಲೂಕಿನ ನಾಲ್ಕೂರು ಗ್ರಾಮದ ಮಾರಾಳಿಯಲ್ಲಿ ನೂತನ ಶಿಲಾಮಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಶ್ರೀ ಬ್ರಹ್ಮ ಬೈದರ್ಕಳ ಮತ್ತು ಶ್ರೀ ಶಿವರಾಯ ಸ್ವಾಮಿ ಹಾಗೂ ಪರಿವಾರ ದೈವಗಳ ಪುನಃ ಪ್ರತಿಷ್ಠಾಪನೆ ಮತ್ತು ಬ್ರಹ್ಮ ಕಲಶೋತ್ಸವ ಜೂನ್ 3 ರಿಂದ ಜೂನ್ 8ರವರೆಗೆ ನಡೆಯಲಿದೆ.
ಮಾರಾಳಿ ಬಾಲಕೃಷ್ಣ ಕರಬ ಇವರ ಪ್ರಧಾನ ಅರ್ಚಕತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಜೂನ್ 3ರಂದು ದೇವತಾ ಪ್ರಾರ್ಥನೆ, ಗಣಪತಿ ಹೋಮ, ನವಗ್ರಹಹೋಮ, ಅಥರ್ವ ಶೀರ್ಷಾಭಿಷೇಕ, ಉಪನಿಷತ್ ಪಾರಾಯಣ ಮತ್ತು ನಾಗಸನ್ನಿಧಿಯಲ್ಲಿ ಆಶ್ಲೇಷಾ ಬಲಿ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿದೆ. ಸಂಜೆ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಗೇಹ ಪ್ರತಿಗ್ರಹ, ಬಿಂಬ ಪರಿಗ್ರಹ, ಸ್ಥಾನ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ ಸಹಿತ ವಿವಿಧ ಪೂಜೆಗಳು ನಡೆಯಲಿದೆ.
ಜೂ. 4ರಂದು ಬೆಳಗ್ಗೆ ಬ್ರಹ್ಮ ಬೈದರ್ಕಳ ಬಿಂಬ ಪ್ರತಿಷ್ಠಾಪನೆ, ಪರಿವಾರ ದೈವಗಳ ಪ್ರತಿಷ್ಠಾಪನೆ ಕಲಾತತ್ವ ಹೋಮ, ಬ್ರಹ್ಮಕಲಶ ಸ್ಥಾಪನೆ, ಕಲಶಾಧಿವಾಸ ಹೋಮ, ಬ್ರಹ್ಮ ಕಲಶಾಭಿಷೇಕ ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ದುರ್ಗಾಪರಮೇಶ್ವರಿ ದೇವರ ಸನ್ನಿಧಿಯಲ್ಲಿ ಸ್ಥಾನ ಶುದ್ದಿ, ಪ್ರಾಸಾದ ಶುದ್ಧಿ, ವಾಸ್ತು ಮತ್ತು ರಾಕ್ಷೋಘ್ನ ಹೋಮ ಸಹಿತ ವಿವಿಧ ಪೂಜೆಗಳು ನಡೆಯಲಿದೆ.
ಜೂ.5ರಂದು ಬೆಳಗ್ಗೆ ಶ್ರೀ ದುರ್ಗಾಪರಮೇಶ್ವರಿ ದೇವರ ಬಿಂಬ ಪ್ರತಿಷ್ಠಾಪನೆ, ಜೀವ ಕುಂಭಾಭಿಷೇಕ ತತ್ವ ಕಲಶಹೋಮ, ತತ್ವ ಕಲಶಾಭಿಷೇಕ, ಚಂಡಿಕಾಹೋಮ, ವಾಗಂಭ್ರಣೀಸೂಕ್ತ ಯಾಗ, ಮಹಾಪೂಜೆ ನಡೆಯಲಿದೆ. ಸಂಜೆ ಪಂಚದುರ್ಗಾ ದೀಪ ನಮಸ್ಕಾರ, ಶ್ರೀ ಶಿವರಾಯ ಸ್ವಾಮಿ ಸನ್ನಿಧಿಯಲ್ಲಿ ಸ್ಥಾನ ಶುದ್ದಿ, ಪ್ರಾಸಾದ ಶುದ್ಧಿ,ರಾಕ್ಷೋಘ್ನ ಹೋಮ ಸೇರಿದಂತೆ ಹಲವು ಪೂಜೆಗಳು ಜರುಗಲಿದೆ.
ಜೂ. 6ರಂದು ದೇವತಾ ಕಾರ್ಯಕ್ರಮಗಳು, ಬ್ರಹ್ಮ ಕಲಶಾಭಿಷೇಕ, ಮಹಾಪೂಜೆ, ಶ್ರೀದೇವಿ ವಿರಾಟ್ ದರ್ಶನ, ಸುವಾಸಿನಿ ಪೂಜೆ, ಮಹಾಮಂತ್ರಾಕ್ಷತೆ ನಡೆಯಲಿದೆ. ಕಿಶೋಕ್ ಕುಮಾರ್ ಹೆಗ್ಡೆ ಕೈಲ್ಕೆರೆ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಅನುವಂಶಿಕ ಮೊಕ್ತೇಸರ ವಿಠಲ ಶೆಟ್ಟಿ ಮಾರಾಳಿಮನೆ ಉಪಸ್ಥಿತರಿರಲಿದ್ದಾರೆ.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಪ್ರಮುಖರಾದ ಎಂ.ಸದಾನಂದ ಶೆಟ್ಟಿ, ಎಂ.ಸುಧಾಕರ ಶೆಟ್ಟಿ ಮಾರಾಳಿಮನೆ, ಶಶಿಧರ ಶೆಟ್ಟಿ, ಕಾಶೀನಾಥ್ ಶೆಣೈ, ಪ್ರತಾಪ್ ಹೆಗ್ಡೆ, ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಶೆಟ್ಟಿ, ಎಂ.ಜಯರಾಮ ಶೆಟ್ಟಿ, ಶೋಭಾ ಕೃಷ್ಣ ಪೂಜಾರಿ ಮತ್ತಿತರರು ಉಪಸ್ಥಿತರಿರುವರು. ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಪ್ರಸ್ತಾವನೆಗೈಯಲಿದ್ದಾರೆ. ಡಾ.ಪಾದೇಕಲ್ಲು ವಿಷ್ಣು ಭಟ್ ಮತ್ತು ಅನಂತ ಚಿನಿವಾರ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಪ್ರತಿನಿತ್ಯ ಅನ್ನಸಂತರ್ಪಣೆ, ನೃತ್ಯ ವೈಭವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಅನುವಂಶಿಕ ಮೊಕೇಸರ ವಿಠಲ ಶೆಟ್ಟಿ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಯಾನಂದ ಶೆಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.