ಪೆಟ್ರೋಲ್ ಪಂಪು ಮುಂಭಾಗ ಕಳವಾಗಿದ್ದ ಬಸ್ಸು ಪತ್ತೆ

0
137

ಉಡುಪಿ : ಪೆಟ್ರೋಲ್ ಬಂಕ್ ಹಿಂಭಾಗ ನಿಲ್ಲಿಸಿದ್ದ ಬಸ್ಸನ್ನು ಮಧ್ಯರಾತ್ರಿ ಕದ್ದು ಪರಾರಿಯಾಗಿದ್ದ ಖದೀಮರ ಯತ್ನವನ್ನು ವಿಫಲಗೊಳಿಸಿರುವ ಉಡುಪಿ ನಗರ ಠಾಣೆಯ ಪೊಲೀಸರು, ಕಳುವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬಸ್ಸನ್ನು ಪತ್ತೆ ಹಚ್ಚಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣದ ಹಿನ್ನೆಲೆ

‘ಶ್ರೀ ದುರ್ಗಾಂಬ’ ಸಂಸ್ಥೆಗೆ ಸೇರಿದ ‘ಬಸ್‌ನ ನಿರ್ವಾಹಕ ಕುಂದಾಪುರದ ಕಟ್‌ಬೆಳ್ತೂರು ನಿವಾಸಿ ಕೃಷ್ಣ (51) ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಸೆಪ್ಟೆಂಬರ್ 28ರ ರಾತ್ರಿ 9:48ರ ಸುಮಾರಿಗೆ ನಗರದ ಹನುಮಾನ್‌ ಪೆಟ್ರೋಲ್‌ ಬಂಕ್‌ ಹಿಂದುಗಡೆ ಬಸ್ಸನ್ನು ನಿಲ್ಲಿಸಿ, ಚಾಲಕ ರಾಯಿನ್ ಅವರೊಂದಿಗೆ ತೆರಳಿದ್ದರು. ಮರುದಿನ (ಸೆ. 29) ಬೆಳಿಗ್ಗೆ ಬಸ್ ತೆಗೆಯಲು ಬಂದಾಗ ನಿಲ್ಲಿಸಿದ್ದ ಸ್ಥಳದಲ್ಲಿ ಬಸ್ ಕಾಣೆಯಾಗಿತ್ತು. ಸುಮಾರು ₹40 ಲಕ್ಷ ಮೌಲ್ಯದ ಬಸ್ಸನ್ನು ಯಾರೋ ಅಪರಿಚಿತ ಖದೀಮರು ಕಳವು ಮಾಡಿಕೊಂಡು ಹೋಗಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪೊಲೀಸರ ಮಿಂಚಿನ ಕಾರ್ಯಾಚರಣೆ

ದೂರು ದಾಖಲಿಸಿಕೊಂಡ ಉಡುಪಿ ನಗರ ಠಾಣೆಯ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ತನಿಖೆ ವೇಳೆ ಸೆ. 29ರಂದು ಬೆಳಗಿನ ಜಾವ 2:00 ಗಂಟೆಗೆ ಸ್ಕೂಟರ್‌ನಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಚಿಟ್ಪಾಡಿಯ ಹನುಮಾನ್ ಗ್ಯಾರೇಜ್ ಬಳಿಯಿಂದ ಬಸ್ಸನ್ನು ಕಳ್ಳತನ ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ತ್ವರಿತವಾಗಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮುದರಂಗಡಿ ಸಮೀಪದ ಮುದ್ದಾಡಿ ಎಂಬಲ್ಲಿನ ಕಾಡು ಪ್ರದೇಶದ (ಹಾಡಿ) ಬಳಿ ಬಿಟ್ಟು ಹೋಗಿದ್ದ ಬಸ್ಸನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ. ಬಸ್ ಕಳವು ಮಾಡಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.