ಆಟಿಡೊಂಜಿ ದಿನದ ಸಂಭ್ರಮದಲ್ಲಿ ಉದ್ಯಮಿ ವಿಲ್ಸನ್ ಫೆರ್ನಾಂಡಿಸ್‌ಗೆ ಸನ್ಮಾನ

0
14

ಉಡುಪಿ : ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾದ ಆಟಿಡೊಂಜಿ ದಿನ ಕಾರ್ಯಕ್ರಮದಲ್ಲಿ ಫೆರ್ನಾಂಡಿಸ್ ಗ್ರೂಪ್ ಆಫ್ ಕಂಪನೀಸ್‌ನ ಸ್ಥಾಪಕ ಹಾಗೂ ಚೇರ್ಮನ್ ವಿಲ್ಸನ್ ಫೆರ್ನಾಂಡಿಸ್ ಅವರನ್ನು ಸನ್ಮಾನಿಸಲಾಯಿತು.

ಆಗಸ್ಟ್ 16ರಂದು ಬ್ರಹ್ಮಗಿರಿಯ ಲಯನ್ಸ್ ಭವನದಲ್ಲಿ ನಡೆದ ಕಾರ್ಯಕ್ರಮವು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಉಡುಪಿ ಜಿಲ್ಲೆಯ ಉಚ್ಚಿಲ–ಕಾಪು ಪ್ರದೇಶದಲ್ಲಿ ಜನಿಸಿದ ವಿಲ್ಸನ್ ಫೆರ್ನಾಂಡಿಸ್ ಅವರು ತಮ್ಮ ಪರಿಶ್ರಮ, ದೂರದೃಷ್ಟಿ, ಪ್ರಾಮಾಣಿಕತೆ ಹಾಗೂ ಉದ್ಯಮಶೀಲತೆಯ ಮೂಲಕ ಉದ್ಯಮ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಫೆರ್ನಾಂಡಿಸ್ ಗ್ರೂಪ್ ಆಫ್ ಕಂಪನೀಸ್ ಮೂಲಕ ವಿದೇಶಿ ಉದ್ಯೋಗ ನೇಮಕಾತಿ ಹಾಗೂ ಮಾನವ ಸಂಪನ್ಮೂಲ ಸೇವೆಗಳನ್ನು ಒದಗಿಸುತ್ತಿರುವ ಅವರು, ಸಾವಿರಾರು ಭಾರತೀಯ ಯುವಕರು ಮತ್ತು ಕಾರ್ಮಿಕರಿಗೆ ವಿದೇಶಗಳಲ್ಲಿ ಉದ್ಯೋಗಾವಕಾಶ ದೊರಕಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಮಧ್ಯಪ್ರಾಚ್ಯ ಸೇರಿದಂತೆ ವಿವಿಧ ರಾಷ್ಟ್ರಗಳ ಕೈಗಾರಿಕಾ ಕ್ಷೇತ್ರಗಳಿಗೆ ಒಂದು ಲಕ್ಷಕ್ಕೂ ಅಧಿಕ ಕಾರ್ಮಿಕರು ಹಾಗೂ ಉದ್ಯೋಗಿಗಳನ್ನು ನೇಮಕ ಮಾಡುವಲ್ಲಿ ಫೆರ್ನಾಂಡಿಸ್ ಗ್ರೂಪ್ ಮಹತ್ವದ ಕೊಡುಗೆ ನೀಡಿದೆ. ಚಿಲ್ಲರೆ ವ್ಯಾಪಾರ, ಆತಿಥ್ಯ, ಆರೋಗ್ಯ ಸೇವೆ, ಸಾಗರ ಮತ್ತು ಶಿಪ್ಯಾರ್ಡ್, ತೈಲ ಮತ್ತು ಅನಿಲ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ನುರಿತ ಮಾನವ ಸಂಪನ್ಮೂಲ ಒದಗಿಸುವ ಮೂಲಕ ಸಂಸ್ಥೆ ತನ್ನದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದೆ.

ಫೆರ್ನಾಂಡಿಸ್ ಶಿಪ್ ಮ್ಯಾನೇಜ್‌ಮೆಂಟ್ ಕಂಪನಿಯ ಮೂಲಕ ನೌಕಾಯಾನ ಕ್ಷೇತ್ರದಲ್ಲಿಯೂ ಸೇವೆ ವಿಸ್ತರಿಸಿರುವ ವಿಲ್ಸನ್ ಫೆರ್ನಾಂಡಿಸ್ ಅವರು ಉದ್ಯಮದ ಯಶಸ್ಸಿನ ಜೊತೆಗೆ ಸಮಾಜಮುಖಿ ಚಟುವಟಿಕೆಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಅಗತ್ಯವಿರುವವರಿಗೆ ನೆರವು ನೀಡುವುದು, ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವುದು ಹಾಗೂ ಸಮಾಜದೊಂದಿಗೆ ಬೆರೆತು ಸೇವೆ ಸಲ್ಲಿಸುವ ಅವರ ಮಾನವೀಯ ಗುಣಗಳನ್ನು ಗುರುತಿಸಿ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶಾಸಕ ಯಶ್ಪಾಲ್ ಸುವರ್ಣ, ಜೆಡಿಎಸ್ ರಾಜ್ಯ ಮುಖಂಡ ಸೂರಜ್ ನಾಯಕ್ ಸೋನಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು, ಉದ್ಯಮಿಗಳಾದ ಪ್ರಸಾದ್ ರಾಜ್ ಕಾಂಚನ್, ಚೇತನ್ ಶೆಟ್ಟಿ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎನ್. ರಮೇಶ್ ಶೆಟ್ಟಿ, ವೈದ್ಯರಾದ ವಿಜಯೇಂದ್ರ, ವರ್ತಕರ ಸಂಘದ ಅಧ್ಯಕ್ಷ ಪ್ರಕಾಶ್ ಸಜ್ಜನ್, ಸಿರಿ ತುಳುವ ಚಾವಡಿ ಕಾರ್ಯಾಧ್ಯಕ್ಷ ಈಶ್ವರ್ ಚಿಟ್ಪಾಡಿ, ಜಿಲ್ಲಾ ಸರ್ಜನ್ ಡಾ. ಅಶೋಕ್, ಎಸ್.ಬಿ. ಟ್ರೇಡರ್ಸ್‌ನ ಸುಶಾಂತ್ ಬ್ರಹ್ಮಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ತುಳುನಾಡ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಜಿಲ್ಲಾ ಮಹಿಳಾ ಅಧ್ಯಕ್ಷೆ ನಾಗಲಕ್ಷ್ಮಿ ಸುಬ್ರಹ್ಮಣ್ಯ ನಗರ, ಜಿಲ್ಲಾ ಕಾರ್ಮಿಕ ಘಟಕದ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ, ವೈದ್ಯರ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಕಾಪು ತಾಲೂಕು ಘಟಕದ ಅಧ್ಯಕ್ಷ ನಿತಿನ್ ಕುಮಾರ್ ಶೆಟ್ಟಿ, ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷ ಶರತ್ ರಾಜ್ ಆರೂರು, ಕಾಪು ತಾಲೂಕು ಮಹಿಳಾ ಅಧ್ಯಕ್ಷೆ ಅನುಸೂಯ ಶೆಟ್ಟಿ, ಬೈರಂಪಳ್ಳಿ ಘಟಕದ ಅಧ್ಯಕ್ಷ ಕೃಷ್ಣಾನಂದ ನಾಯಕ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಪವಿತ್ರ ಆಚಾರ್ಯ, ಜಿಲ್ಲಾ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾಣಬೆಟ್ಟು, ಮನೋಜ್ ಕೆ.ಜಿ. ರೋಡ್, ಜಿಲ್ಲಾ ಜಾಲತಾಣ ಅಧ್ಯಕ್ಷ ರೋಶನ್ ಡಿಸೋಜ ಅಮ್ಮುಂಜೆ, ಗೌರವ ಸಲಹೆಗಾರ ಸುದಾಕರ್ ಅಮೀನ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.