ಮಂಗಳೂರು : ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್ (ರಿ.) ಮಂಗಳೂರು ಇದರ ವತಿಯಿಂದ ಆಗಸ್ಟ್ 23ರಂದು ಮರಿಯಲದ ಮಿನದನ ಕಾರ್ಯಕ್ರಮ ಹಾಗೂ ಸಮಾರಂಭವನ್ನು ಗ್ರಾಂಡ್ ಬೇ, ಮರವೂರಿನಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 9ರವರೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮದ ಪೂರ್ವಭಾವಿ ಸಭೆಯು ಹೋಟೆಲ್ ಕುಡ್ಲ ಪೆವಿಲಿಯನ್ ಸಭಾಂಗಣದಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ದೇವಿ ಚರಣ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆಗಸ್ಟ್ 23ರಂದು ಬೆಳಿಗ್ಗೆ 9 ಗಂಟೆಗೆ ಡಾ. ಅತ್ತೂರು ಸದಾನಂದ ಶೆಟ್ಟಿ ಹಾಗೂ ಪಡು ಚಿತ್ತರಂಜನ್ ರೈ–ನಾಗರತ್ನ ದಂಪತಿ ಅವರು ಮರಿಯಲದ ಮಿನದನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ದಿನವಿಡೀ ವಿವಿಧ ಕ್ರೀಡಾಕೂಟಗಳು, ಸ್ಪರ್ಧೆಗಳು ಹಾಗೂ ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ.
ಸಂಜೆ 5 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಡಾ. ಅತ್ತೂರು ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಮೋಹನ್ ಆಳ್ವ ದೀಪ ಪ್ರಜ್ವಲನ ನೆರವೇರಿಸಲಿದ್ದಾರೆ. ಗೌರವಾತಿಥಿಗಳಾಗಿ ಶಶಿಧರ ಶೆಟ್ಟಿ ಬರೋಡಾ ಹಾಗೂ ಮುಖ್ಯ ಅತಿಥಿಗಳಾಗಿ ಶ್ರೀಪಾದ ಅಜಿತ್ ರೈ, ಕರುಣಾಕರ್ ಎಂ. ಶೆಟ್ಟಿ, ಅಜಿತ್ ಹೆಗ್ಡೆ, ವೇಣುಗೋಪಾಲ್ ಶೆಟ್ಟಿ, ಲ| ಎಸ್. ಸಂಜೀವ ಶೆಟ್ಟಿ ಉಪಸ್ಥಿತರಿರುವರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಗುವುದು. ಬ್ಯಾಂಕ್ ಆಫ್ ಬರೋಡಾ, ವಲಯ ಕಚೇರಿ ಮಂಗಳೂರು ಇದರ ಮಹಾಪ್ರಬಂಧಕರು ಹಾಗೂ ವಲಯ ಮುಖ್ಯಸ್ಥರಾದ ರಾಜೇಶ್ ಖನ್ನಾ ಮತ್ತು ತೇವುನಾಡು ಗುತ್ತುವಿನ ಮಂಜುನಾಥ ಆಳ್ವ ಅವರನ್ನು ಸನ್ಮಾನಿಸಲಾಗುವುದು.
ಇದೇ ಸಂದರ್ಭದಲ್ಲಿ ಸದಾಶಿವ ಶೆಟ್ಟಿ ಮಂಜನಾಡಿ ಅವರಿಗೆ ಟ್ರಸ್ಟ್ ವತಿಯಿಂದ ನಿರ್ಮಿಸಿಕೊಡಲಾದ ಮನೆಯ ಕೀಲಿಕೈಯನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಗುವುದು.
ಕಾರ್ಯಕ್ರಮದಲ್ಲಿ ಪೋಸ್ಟಲ್ ಇನ್ಸೂರೆನ್ಸ್ ವತಿಯಿಂದ ಅಪಘಾತ ವಿಮೆಯ ವ್ಯವಸ್ಥೆ ಮಾಡಲಾಗಿದ್ದು, ವಿಮೆಯ ಮೊತ್ತವನ್ನು ಪಾಲಿಸಿದಾರರೇ ಭರಿಸಬೇಕಾಗುತ್ತದೆ. ಅಲ್ಲದೆ ತಾಲೂಕು ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಪೂರ್ವಭಾವಿ ಸಭೆಯಲ್ಲಿ ಟ್ರಸ್ಟ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳಾದ ರಾಜ್‌ಗೋಪಾಲ್ ರೈ, ರವೀಂದ್ರ ಶೆಟ್ಟಿ ಉಳಿದೊಟ್ಟು, ರಾಮಚಂದ್ರ ಆಳ್ವ, ಪ್ರಸಾದ್ ರೈ ಕಲ್ಲಿಮಾರ್, ಜಗನ್ನಾಥ ಶೆಟ್ಟಿ, ವಿಜಯಲಕ್ಷ್ಮೀ ಬಿ. ಶೆಟ್ಟಿ, ಆರತಿ ರಾಮಚಂದ್ರ ಆಳ್ವ ಹಾಗೂ ಮಾಧ್ಯಮ ವಕ್ತಾರ ಮುಲ್ಕಿ ಕರುಣಾಕರ ಶೆಟ್ಟಿ ಸೇರಿದಂತೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

