ಸಿ-ಸೆಕ್ಷನ್ ವೇಳೆ ಎಡವಟ್ಟು : ಬಾಣಂತಿಯ ಹೊಟ್ಟೆಯಲ್ಲೇ ಉಳಿದ ಗ್ಲೌಸ್, ಬಟ್ಟೆ!

0
7

ವೈದ್ಯಕೀಯ ನಿರ್ಲಕ್ಷ್ಯದ ಆಘಾತಕಾರಿ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಕಿಗೆ ಬಂದಿದೆ. ಸಿ-ಸೆಕ್ಷನ್ ಹೆರಿಗೆ ಶಸ್ತ್ರಚಿಕಿತ್ಸೆಯ ವೇಳೆ 19 ವರ್ಷದ ಬಾಣಂತಿಯ ಹೊಟ್ಟೆಯೊಳಗೆ ಸರ್ಜಿಕಲ್ ಗ್ಲೌಸ್ ಹಾಗೂ ಒರೆಸುವ ಬಟ್ಟೆಗಳನ್ನು ಬಿಟ್ಟು ಹೊಲಿಗೆ ಹಾಕಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಯುವತಿ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ಸಂಧ್ಯಾ ಸೂರಜ್ ಗಾಯಕ್ವಾಡ್ ಅವರಿಗೆ ಆಗಸ್ಟ್ 1ರಂದು ಬೀಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಲಾಗಿತ್ತು. ನಾಲ್ಕು ದಿನಗಳ ಬಳಿಕ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆದರೆ ಮನೆಗೆ ತೆರಳಿದ ಬಳಿಕ ತೀವ್ರ ಹೊಟ್ಟೆನೋವು, ಅಸ್ವಸ್ಥತೆ ಹಾಗೂ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕುಟುಂಬಸ್ಥರು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು.

ಅಲ್ಲಿ ನಡೆಸಿದ ಸ್ಕ್ಯಾನಿಂಗ್‌ನಲ್ಲಿ ಯುವತಿಯ ಹೊಟ್ಟೆಯೊಳಗೆ ಕೆಲವು ವಸ್ತುಗಳು ಇರುವುದು ಪತ್ತೆಯಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಪುಣೆಯ ಸಾಸೂನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ವೇಳೆ ಹೊಟ್ಟೆಯೊಳಗೆ ಉಳಿದಿದ್ದ ಸರ್ಜಿಕಲ್ ಗ್ಲೌಸ್ ಹಾಗೂ ಟಿಶ್ಯೂ/ಒರೆಸುವ ಬಟ್ಟೆಗಳನ್ನು ಹೊರತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆಯ ಬಳಿಕವೂ ಯುವತಿಯ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹೆರಿಗೆಯಾದ ಕೆಲವೇ ದಿನಗಳಲ್ಲಿ ತಾಯಿ ಇಂತಹ ಗಂಭೀರ ಪರಿಸ್ಥಿತಿಗೆ ಸಿಲುಕಿರುವುದರಿಂದ ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವತಿಯ ಪತಿ, ಈ ಘಟನೆಗೆ ಕಾರಣರಾದ ವೈದ್ಯರು ಹಾಗೂ ಶಸ್ತ್ರಚಿಕಿತ್ಸಾ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. “ನನ್ನ ಪತ್ನಿಗೆ ತನ್ನ ಹಸುಗೂಸನ್ನು ಎತ್ತಿಕೊಳ್ಳಲೂ ಶಕ್ತಿಯಿಲ್ಲದಂತಾಗಿದೆ. ಇಂತಹ ನಿರ್ಲಕ್ಷ್ಯಕ್ಕೆ ಹೊಣೆಗಾರರಾದವರ ವಿರುದ್ಧ ಕಠಿಣ ಕ್ರಮವಾಗಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಇತ್ತ ಯುವತಿಯ ತಾಯಿ ಕೂಡ ಕಣ್ಣೀರಿಟ್ಟಿದ್ದು, ಮಗಳು ಹೆರಿಗೆಯ ಬಳಿಕ ಸಂತೋಷದಿಂದ ಮಗುವನ್ನು ನೋಡಿಕೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯದಿಂದಾಗಿ ಗಂಭೀರ ಸ್ಥಿತಿಗೆ ತಲುಪಿರುವುದು ಕುಟುಂಬಕ್ಕೆ ಆಘಾತ ತಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ವೈದ್ಯರಿಗೆ ನೋಟಿಸ್

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಬೀಡ್ ಜಿಲ್ಲಾ ಮುಖ್ಯ ಶಸ್ತ್ರಚಿಕಿತ್ಸಕ ಸತೀಶ್‌ಕುಮಾರ್ ಸೋಲಂಕೆ ಅವರು ಶಸ್ತ್ರಚಿಕಿತ್ಸಾ ತಂಡಕ್ಕೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ. ಘಟನೆಯ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಲಾಗಿದ್ದು, ವರದಿ ಆಧರಿಸಿ ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೋಂಕಿನ ಅಪಾಯ

ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಬಳಸುವ ಗ್ಲೌಸ್, ಗಾಜ್, ಬಟ್ಟೆ ಅಥವಾ ಇತರ ವಸ್ತುಗಳು ದೇಹದೊಳಗೆ ಉಳಿದುಕೊಂಡರೆ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಇವುಗಳಿಂದ ಸೋಂಕು ಉಂಟಾಗಿ, ಕೆಲವೊಮ್ಮೆ ಸೆಪ್ಸಿಸ್, ಆಂತರಿಕ ಅಂಗಾಂಗಗಳಿಗೆ ಹಾನಿ ಹಾಗೂ ಜೀವಕ್ಕೆ ಅಪಾಯ ಉಂಟಾಗಬಹುದು.

ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆ ಮುಗಿಯುವ ಮೊದಲು ಬಳಸಲಾದ ಗ್ಲೌಸ್, ಗಾಜ್, ಬಟ್ಟೆ ಹಾಗೂ ಇತರ ವೈದ್ಯಕೀಯ ಸಾಮಗ್ರಿಗಳನ್ನು ಸಿಬ್ಬಂದಿ ಎಣಿಕೆ ಮಾಡುವುದು ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಈ ಪ್ರಕರಣದಲ್ಲಿ ಅಂತಹ ಪ್ರೋಟೋಕಾಲ್‌ಗಳನ್ನು ಸರಿಯಾಗಿ ಪಾಲಿಸಲಾಗಿದೆಯೇ ಎಂಬ ಪ್ರಶ್ನೆಯೂ ಇದೀಗ ಉದ್ಭವಿಸಿದೆ.

ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ಯುವತಿಯ ಆರೋಗ್ಯ ಸ್ಥಿತಿ ಹಾಗೂ ತನಿಖಾ ವರದಿಯ ಬಳಿಕ ಪ್ರಕರಣದಲ್ಲಿ ಮತ್ತಷ್ಟು ಮಾಹಿತಿ ಹೊರಬರುವ ಸಾಧ್ಯತೆಯಿದೆ.