
ಹೆಬ್ರಿ : ಆರೋಗ್ಯದ ಅರಿವು ಎಲ್ಲರಿಗೂ ಇರಬೇಕು. ಪ್ರಾಚೀನ ಕಾಲದಲ್ಲಿ ಆಟಿ ತಿಂಗಳಿನಲ್ಲಿ ಎಲ್ಲರೂ ಬಹಳ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೂ ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನೇ ಆಹಾರವನ್ನಾಗಿ ಉಪಯೋಗಿಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ಆಷಾಢದ ದಿನಗಳನ್ನು ಹಬ್ಬದ ರೀತಿಯಲ್ಲಿ
ಆಚರಿಸುತ್ತೇವೆ. ಆಷಾಡ – ಸೋಣೆ ತಿಂಗಳುಗಳ ಹೆಸರು ಬಿಟ್ಟರೆ ಬೇರೆ ತಿಂಗಳುಗಳ ಹೆಸರೇ ನಮ್ಮ ಇಂದಿನ ಮಕ್ಕಳಿಗೆ ಗೊತ್ತಿಲ್ಲ. ಕಲಿಸುವ ಕೆಲಸವನ್ನುನಾವು ಮಾಡುತ್ತಿಲ್ಲ. ಯುವ ಜನತೆ ಪ್ರತಿ ತಿಂಗಳ ವಿಶೇಷತೆಯನ್ನು ತಿಳಿದುಕೊಳ್ಳಬೇಕು ಜೊತೆಗೆ ನಮ್ಮ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ಆಗಬೇಕು.
ಪ್ರಕೃತಿಯ ಆರಾಧಕರಾದ ಹಿರಿಯರು ಪ್ರಕೃತಿಯಲ್ಲೇ ಔಷಧಿಯನ್ನು ಕಂಡುಕೊಂಡವರು. ಇಂದಿನ ಮಕ್ಕಳು ಜಂಕ್ ಫುಡ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ ಮತ್ತು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳು ಕೇವಲ ಬಾಯಿ ರುಚಿಗೆ ಮರುಳಾಗದೆ, ಮಾಡಿದ ಅಡುಗೆಗಳಲ್ಲಿ ಎಲ್ಲವನ್ನು ಬಡಿಸಿಕೊಂಡು ಉಣ್ಣುವ ಮನೋಭಾವ ಬೆಳೆಸಿಕೊಳ್ಳಬೇಕು. ಪೋಷಕರ ಮತ್ತು ಶಿಕ್ಷಕರ ಸಹಕಾರದಿಂದ ನಮ್ಮ ಸುತ್ತಮುತ್ತಲು ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಆಹಾರ ಪದಾರ್ಥಗಳನ್ನು ತಯಾರಿಸಿ ಅದರ ಉಪಯುಕ್ತತೆಯ ಅರಿವನ್ನು ಮಕ್ಕಳಿಗೆ ಮೂಡಿಸುವ ಪ್ರಯತ್ನವನ್ನು ಮುದ್ರಾಡಿ ಪ್ರೌಢಶಾಲೆಯು ಮಾಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಪಡುಕುಡೂರು ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮಾ ಎಂ. ಹೇಳಿದರು.
ಅವರು ಮುದ್ರಾಡಿ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯಲ್ಲಿ ಶಾಲೆಯ ಕನ್ನಡ ಸಾಹಿತ್ಯ ಸಂಘ, ಪರಿಸರ ಸಂಘ ಹಾಗೂ ಆರೋಗ್ಯ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಆಸಾಡಿ ಬದ್ಕ್ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.ಕಾರ್ಯಕ್ರಮದ ಮಾರ್ಗದರ್ಶಕರಾದ ಶಾಲೆಯ ಮುಖ್ಯ ಶಿಕ್ಷಕರಾದ ಬಲ್ಲಾಡಿ ಚಂದ್ರಶೇಖರ ಭಟ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಅಶೋಕ್ ಕುಮಾರ್ ಶೆಟ್ಟಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕಲ್ಪನಾ ಪರಿಸರ ಸಂಘ ಹಾಗೂ ಅರೋಗ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಶ್ಯಾಮಲಾ ಕೊಠಾರಿ, ಕನ್ನಡ ಸಾಹಿತ್ಯ ಸಂಘ ಹಾಗೂ ಪರಿಸರ ಸಂಘದ ಅಧ್ಯಕ್ಷರಾದ ಶೋಭಿತ್ ಹಾಗೂ ಸಾನ್ವಿತ್, ಶಾಲಾ ವಿದ್ಯಾರ್ಥಿ ನಾಯಕ ಪ್ರತೀಕ್, ಶಿಕ್ಷಕಿ ಅನುಷಾ ಉಪಸ್ಥಿತರಿದ್ದರು.ಸಮಗ್ರ ನಿರ್ವಾಹಕರಾದ ಕನ್ನಡ ಸಾಹಿತ್ಯ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಪಿ. ವಿ. ಆನಂದ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ಹಿರಿಯ ಶಿಕ್ಷಕ ಮಹೇಶ್ ನಾಯ್ಕ್ ವಂದಿಸಿದರು. ಪೋಷಕರು,ಮಕ್ಕಳು ಹಾಗೂ ಶಿಕ್ಷಕರು ತಯಾರಿಸಿದ ನಲವತ್ತಕ್ಕೂ ಹೆಚ್ಚು ತಿಂಡಿ ತಿನಿಸುಗಳನ್ನು ಪ್ರದರ್ಶಿಸಿ, ಭೋಜನ ಸವಿದು ಸಂಭ್ರಮಿಸಿದರು. ಶಿಕ್ಷಕ ರಘುಪತಿ ಹೆಬ್ಬಾರ್, ಕಛೇರಿ ಸಹಾಯಕರಾದ ಮಹೇಶ್ ಕಾನ್ಗುಂಡಿ, ಅಡುಗೆ ಸಹಾಯಕರಾದ ಸುಮಿತ್ರಾ ಹಾಗೂ ರೇಖಾ ಸಹಕರಿಸಿದರು.
