ಬ್ರಹ್ಮಾವರ ರುಡ್‌ಸೆಟ್ ಸಂಸ್ಥೆಯಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ಜನ್ಮದಿನಾಚರಣೆ

0
41

ಬ್ರಹ್ಮಾವರ: ಕೆನರಾ ಬ್ಯಾಂಕಿನ ಸಂಸ್ಥಾಪಕರಾದ ದಿವಂಗತ ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ 174ನೇ ಜನ್ಮದಿನಾಚರಣೆಯನ್ನು ಬ್ರಹ್ಮಾವರದ ರುಡ್‌ಸೆಟ್ ಸಂಸ್ಥೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.

ಈ ವಿಶೇಷ ಸಂದರ್ಭದಲ್ಲಿ ಸಂಸ್ಥೆಯಲ್ಲಿ ಸಿಸಿಟಿವಿ ಅಳವಡಿಕೆ, ದುರಸ್ತಿ ಮತ್ತು ಸೇವಾ ತರಬೇತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ಹರಾಡಿ ಶಾಖೆಯ ಹಿರಿಯ ಪ್ರಬಂಧಕರಾದ ಶ್ರೀ ಮಹೇಂದ್ರ ಬಾಬು ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಬ್ರಹ್ಮಾವರದ ರೂಪ್ಫ್ಲಾಸ್ಟ್ ಕನ್ಸ್ಟ್ರಕ್ಷನ್ ಕಂಪನಿಯ ಮಾಲೀಕರಾದ ಶ್ರೀ ಕೆ. ಸಿ. ಅಮೀನ್ ಹಾಗೂ ಸಂಸ್ಥೆಯ ವ್ಯವಸ್ಥಾಪಕರಾದ ಶ್ರೀಮತಿ ಕಮಲಾ ಕೆ. ಸಿ. ಅಮೀನ್ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಗಣ್ಯರು ಶ್ರೀ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಅಮೂಲ್ಯ ಕೊಡುಗೆಗಳನ್ನು ಸ್ಮರಿಸಿ, ಯುವಜನತೆಯ ಸ್ವಾವಲಂಬನೆಗೆ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆಯ ಮಹತ್ವವನ್ನು ವಿವರಿಸಿದರು. ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳಿಗೆ ಶುಭ ಹಾರೈಸಿ, ತಮ್ಮ ಕಲಿಕಾ ಅವಧಿಯನ್ನು ಸದುಪಯೋಗಪಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡುವಂತೆ ಪ್ರೇರೇಪಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆ ಬ್ರಹ್ಮಾವರದ ನಿರ್ದೇಶಕರಾದ ಡಾ. ಬೊಮ್ಮಯ್ಯ ಎಂ. ಅವರು ಅಧ್ಯಕ್ಷೀಯ ಭಾಷಣದಲ್ಲಿ ದಿನದ ಮಹತ್ವವನ್ನು ವಿವರಿಸಿ, ಕೌಶಲ್ಯಾಧಾರಿತ ತರಬೇತಿಯ ಮೂಲಕ ಯುವಜನರನ್ನು ಸ್ವಾವಲಂಬಿಗಳನ್ನಾಗಿ ರೂಪಿಸುವಲ್ಲಿ ಸಂಸ್ಥೆಯ ಬದ್ಧತೆಯನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು, ಪ್ರಸ್ತುತ ನಡೆಯುತ್ತಿರುವ ಜೂನಿಯರ್ ಬ್ಯೂಟಿ ಪ್ರಾಕ್ಟೀಷನರ್ (ಲಘು ಉದ್ಯಮಿ) ತರಬೇತಿ ಶಿಬಿರದ ಅಭ್ಯರ್ಥಿಗಳು ಹಾಗೂ ಸಿಸಿಟಿವಿ ಅಳವಡಿಕೆ, ದುರಸ್ತಿ ಮತ್ತು ಸೇವಾ ತರಬೇತಿಯ ಅಭ್ಯರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಉಪನ್ಯಾಸಕರಾದ ಶ್ರೀಮತಿ. ಚೈತ್ರ ಹರೀಶ್,ಕಾರ್ಯಕ್ರಮವನ್ನು ನಿರೂಪಿಸಿ, ಶಿಬಿರಾರ್ಥಿ ಶ್ರೀಮತಿ. ಕೌಶಲ್ಯ ಪ್ರಾರ್ಥಿಸಿ, ಕಚೇರಿ ಸಹಾಯಕರಾದ ಶ್ರೀ. ಶಾಂತಪ್ಪ ಸ್ವಾಗತಿಸಿ, ಹಿರಿಯ ಉಪನ್ಯಾಸಕರಾದ ಶ್ರೀ. ಸಂತೋಷ್ ಶೆಟ್ಟಿ ವಂದಿಸಿದರು.