ಅಮೃತ ಭಾರತಿ ವಿದ್ಯಾಲಯದ ವಿದ್ಯಾರ್ಥಿಗಳಿಂದ ವಿಜಯೋತ್ಸವ ಆಚರಣೆ

0
7

ಇತ್ತೀಚೆಗೆ ಶಾಲಾ ಶಿಕ್ಷಣ ಇಲಾಖೆ ನಡೆಸಿದ ರಾಜ್ಯ ಮಟ್ಟದ 17ರ ವಯೋಮಿತಿಯ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಬ್ರಿ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಚಾಂಪಿಯನ್ ಆಗಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಹೆಬ್ರಿ ಶ್ರೀ ಅನಂತಪದ್ಮನಾಭ ದೇವಸ್ಥಾನದಿಂದ ಅಮೃತಭಾರತಿಯ ತನಕ ತೆರೆದ ವಾಹನದಲ್ಲಿ  ಚೆಂಡೆ ವಾದನ ಮೂಲಕ  ಮೆರವಣಿಗೆ ಸಾಗಿ ಬಂದು ವಿಜಯೋತ್ಸವವನ್ನು ಆಚರಿಸಿದರು. ಹೆಬ್ರಿ  ಪರಿಸರದ ಕ್ರೀಡಾ ಪ್ರೇಮಿಗಳು , ಹಿತೈಷಿಗಳು ಕ್ರೀಡಾಳುಗಳನ್ನು ಹಾರ ಶಾಲುಗಳಿಂದ ಗೌರವಿಸಿದರು.

ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ  ವಿದ್ಯಾಲಯದ ಆಡಳಿತ ಮಂಡಳಿ ಅಧ್ಯಕ್ಷ ಶೈಲೇಶ್ ಕಿಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಜೀವನದಲ್ಲಿ ಅಸಾಧ್ಯವಾದುದು ಯಾವುದು ಇಲ್ಲ. ಛಲ ಬಿಡದ, ಬದ್ಧತೆಯಿಂದ ಕೆಲಸ ಮಾಡುವ ವ್ಯಕ್ತಿ ಸಾಧಕನಾಗುತ್ತಾನೆ ಇದನ್ನು ಮುಂದಿನ ಪಂದ್ಯದಲ್ಲಿ ಯಶಸ್ವಿಯಾಗಿ ಮಾಡಿ ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಸೀತಾನದಿ ವಿಠಲ್ ಶೆಟ್ಟಿ ಮಾತನಾಡಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೆ ಹಲವಾರು ಅವಕಾಶಗಳು ಇದೆ. ಅಂತೆಯೇ ಸವಾಲುಗಳನ್ನು ಎದುರಿಸಿ, ಸಾಧನೆ ಮಾಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಟ್ರಸ್ಟ್ ನ ವಿಶ್ವಸ್ಥರಾದ ಲಕ್ಷ್ಮಣ ಭಟ್, ಭಾಸ್ಕರ್ ಜೋಯಿಸ್,  ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ, ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಸೀತಾನದಿ ವಿಠಲ್ ಶೆಟ್ಟಿ, ಜಿಲ್ಲಾ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ರವಿಚಂದ್ರ ಕಾರಂತ, ಸಂಸ್ಥೆಯ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅಪರ್ಣಾ ಆಚಾರ್, ಶಕುಂತಲಾ , ಅರುಣ್ ಕುಮಾರ್ ಹೆಚ್ ವೈ  , ಸಂಸ್ಥೆಯ ಪಿ ಆರ್ ಓ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದು, ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ನಿಶಾನ್ ಶೆಟ್ಟಿ ಮತ್ತು ತರಬೇತಿದಾರರನ್ನು ಹಾಗೂ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಪೋಷಕರು,  ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಗುರು ವೃಂದ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಅಪರ್ಣಾ ಆಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಸ್ಥೆಯ ವಿದ್ಯಾರ್ಥಿ ಶ್ರೀಅವಿಘ್ನ ಪ್ರಾರ್ಥಿಸಿ, ಸಂಸ್ಥೆಯ ಸಂಸ್ಕೃತ ಶಿಕ್ಷಕ ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಸ್ವಾಗತಿಸಿ ನಿರೂಪಿಸಿದರು.