ದೇಶದಲ್ಲಿ ಹೆಚ್ಚುತ್ತಿರುವ ಬೆಳ್ಳಿ ಆಮದಿಗೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ನಿಗದಿಪಡಿಸಿದ ಕೆಲವು ವಿಭಾಗಗಳ ಬೆಳ್ಳಿ ಆಮದು ನಿಯಮಗಳನ್ನು ಮಂಗಳವಾರದಿಂದ ಜಾರಿಗೆ ಬರುವಂತೆ ಮತ್ತಷ್ಟು ಕಠಿಣಗೊಳಿಸಿದೆ. ಇನ್ಮುಂದೆ ಯಾವುದೇ ಅಧಿಕೃತ ಏಜೆನ್ಸಿಗಳು ಅಥವಾ ಚಾನೆಲ್‌ಗಳ ಮೂಲಕ ಬೆಳ್ಳಿಯನ್ನು ಆಮದು ಮಾಡಿಕೊಳ್ಳಬೇಕಾದರೂ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯದ (DGFT) ಮಾನ್ಯತೆ ಪಡೆದ ಆಮದು ಅಧಿಕಾರ ಪತ್ರ ಹೊಂದಿರುವುದು ಕಡ್ಡಾಯವಾಗಿದೆ.
ವಾಣಿಜ್ಯ ಇಲಾಖೆಯ ಅಧೀನದಲ್ಲಿರುವ DGFT ಹೊರಡಿಸಿರುವ ಐಟಿಸಿ (ಎಚ್‌ಎಸ್) 2022ರ ಶೆಡ್ಯೂಲ್-1ರ ಚಾಪ್ಟರ್ 71 ರ ಅಡಿಯಲ್ಲಿ ಈ ಹೊಸ ತಿದ್ದುಪಡಿ ತರಲಾಗಿದೆ.ಶೇ. 99.9 ಅಥವಾ ಅದಕ್ಕಿಂತ ಹೆಚ್ಚು ಶುದ್ಧತೆ ಹೊಂದಿರುವ ಬೆಳ್ಳಿ ಕಣಗಳು (Silver grains) ಇನ್ನುಳಿದ ಕೆಲವು ಕಚ್ಚಾ ಬೆಳ್ಳಿ ಉತ್ಪನ್ನಗಳು (Unwrought silver products)ಈ ಎಲ್ಲಾ ಉತ್ಪನ್ನಗಳು ಸದ್ಯ ‘ನಿರ್ಬಂಧಿತ’ (Restricted) ಆಮದು ವರ್ಗದಡಿಯಲ್ಲೇ ಮುಂದುವರಿಯಲಿವೆ.
ಇದಕ್ಕೂ ಮುನ್ನ ಇದ್ದ ನಿಯಮಗಳ ಪ್ರಕಾರ, ಆರ್‌ಬಿಐ (RBI) ಸೂಚಿಸಿದ ಬ್ಯಾಂಕ್‌ಗಳು, ಡಿಜಿಎಫ್‌ಟಿ (DGFT) ಅಧೀನದ ಇತರೆ ಏಜೆನ್ಸಿಗಳು ಮತ್ತು ಐಎಫ್‌ಎಸ್‌ಸಿಎ (IFSCA) ಸೂಚಿಸಿದ ಜ್ಯುವೆಲ್ಲರ್ಸ್‌ಗಳು ಭಾರತೀಯ ಅಂತಾರಾಷ್ಟ್ರೀಯ ಬುಲಿಯನ್ ಎಕ್ಸ್‌ಚೇಂಜ್ (IIBX) ಮೂಲಕ ನೇರವಾಗಿ ಬೆಳ್ಳಿಯನ್ನು ಆಮದು ಮಾಡಿಕೊಳ್ಳಲು ಅವಕಾಶವಿತ್ತು. ಆದರೆ, ಹೊಸ ನಿಯಮದ ಪ್ರಕಾರ ಇನ್ಮುಂದೆ ಈ ಯಾವುದೇ ಚಾನೆಲ್ ಅಥವಾ ಏಜೆನ್ಸಿಗಳ ಮೂಲಕ ಆಮದು ಮಾಡಿಕೊಳ್ಳಬೇಕಾದರೂ, DGFT ಯಿಂದ ಪಡೆದ ಮಾನ್ಯತೆ ಇರಲೇಬೇಕು.
ಆದಾಗ್ಯೂ, ರಿಫೈನರಿಗಳು ‘ಅಕ್ಚುವಲ್ ಯೂಸರ್’ (AU) ಷರತ್ತಿನ ಅಡಿಯಲ್ಲಿ ಲೈಸೆನ್ಸ್ ಬಳಸಿ ಕಚ್ಚಾ ಬೆಳ್ಳಿ (Silver dore) ಆಮದು ಮಾಡಿಕೊಳ್ಳುವ ನಿಯಮದಲ್ಲಿ ಸರ್ಕಾರ ಯಾವುದೇ ಬದಲಾವಣೆ ಮಾಡಿಲ್ಲ.
ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ವಿದೇಶಿ ವಿನಿಮಯ ಗಳಿಕೆಯ (Forex Reserves) ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಮತ್ತು ಅನಗತ್ಯ ಆಮದಿಗೆ ಕಡಿವಾಣ ಹಾಕಲು ಸರ್ಕಾರ ಕಳೆದ ತಿಂಗಳಷ್ಟೇ ಚಿನ್ನ ಮತ್ತು ಬೆಳ್ಳಿಯ ಮೇಲಿನ ಆಮದು ಸುಂಕವನ್ನು ಶೇ. 15 ಕ್ಕೆ ಏರಿಸಿತ್ತು.
ಕಳೆದ ಏಪ್ರಿಲ್ ತಿಂಗಳೊಂದರಲ್ಲೇ ಬೆಳ್ಳಿ ಆಮದು ವರ್ಷದಿಂದ ವರ್ಷಕ್ಕೆ ಶೇ. 157 ರಷ್ಟು ಜಿಗಿತ ಕಂಡು 411 ಮಿಲಿಯನ್ ಡಾಲರ್ ಗೆ ತಲುಪಿತ್ತು. ಇನ್ನು 2025-26ರ ಆರ್ಥಿಕ ವರ್ಷದಲ್ಲಿ ಬೆಳ್ಳಿ ಆಮದು ಶೇ. 150 ರಷ್ಟು ಹೆಚ್ಚಾಗಿ ಬರೋಬ್ಬರಿ 12 ಬಿಲಿಯನ್ ಡಾಲರ್ ಮುಟ್ಟಿತ್ತು.
ಭಾರತವು ಮುಖ್ಯವಾಗಿ ಯುಎಇ (UAE), ಬ್ರಿಟನ್ (UK) ಮತ್ತು ಚೀನಾದಿಂದ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಭಾರತದಲ್ಲಿ ಬೆಳ್ಳಿಯನ್ನು ಪ್ರಮುಖವಾಗಿ ಆಭರಣ ತಯಾರಿಕೆ ಮತ್ತು ಕೈಗಾರಿಕಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.

