ಶಿಸ್ತು, ಸಹನೆ, ಕಾರ್ಯಬದ್ಧತೆಯನ್ನು ಕಲಿಸುವ ಕ್ರೀಡೆ ಚೆಸ್: ಪಾಂಡುರಂಗ ಪೈ

0
32

ಅಮಾಸೆಬೈಲು : ಚದುರಂಗ ಆಟವು ಶಿಸ್ತು, ಸಹನೆ ಮತ್ತು ಕಾರ್ಯಬದ್ಧತೆಯನ್ನು ಕಲಿಸುತ್ತದೆ. ಮಾನಸಿಕವಾಗಿ ಸಿದ್ಧರಾಗಿ ಪ್ರಾಮಾಣಿಕ ಪ್ರಯತ್ನದಿಂದ ಯಶಸ್ಸು ಸಾಧಿಸಲು ಇದು ನೆರವಾಗುತ್ತದೆ ಎಂದು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾದ ಪಾಂಡುರಂಗ ಪೈ ಅವರು ಅಭಿಪ್ರಾಯಪಟ್ಟರು.

ಅವರು ಅಮಾಸೆಬೈಲಿನ ಡ್ಯುಯಲ್ ಸ್ಟಾರ್ ಶಾಲೆಯಲ್ಲಿ ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಪ್ರಾಯೋಜಿತ ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ 2026 ನ್ನು ಉದ್ಘಾಟಿಸಿ ಮಾತನಾಡಿದರು. ವಿದ್ಯೆಯೊಂದಿಗೆ ಕ್ರೀಡೆಯೂ ಅಷ್ಟೇ ಮುಖ್ಯ. ಅಂತಹ ಕ್ರೀಡೆಗಳಲ್ಲಿ ಚದುರಂಗ ಒಂದು ಉತ್ತಮ ಕ್ರೀಡೆಯಾಗಿದೆ. ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾಂಡುರಂಗ ಪೈ ರವರು ವಹಿಸಿದ್ದರು. ವೇದಿಕೆಯಲ್ಲಿ ಡ್ಯುಯಲ್ ಸ್ಟಾರ್ ಶಾಲೆಯ ಅಧ್ಯಕ್ಷರಾದ ಗುರುರಾಜ್ ಅಡಿಗ, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಕಾರ್ಯದರ್ಶಿ ಮಹೇಶ್ ಹೈಕಾಡಿ, ಜಿಲ್ಲಾ ಕ್ರೀಡಾ ಪ್ರಮುಖ್ ವಿಜಯ್ ಕುಮಾರ್ ಶೆಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ರಾಧಿಕಾ ಎಸ್, ದೈಹಿಕ ಶಿಕ್ಷಣ ಶಿಕ್ಷಕರಾದ ಕುಮಾರ್ ಮತ್ತು ವಿದ್ಯಾರ್ಥಿ ನಾಯಕಿ ಕು. ಮಾನ್ಯ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿದ್ಯಾಭಾರತಿ ಕರ್ನಾಟಕ ಜಿಲ್ಲಾ ಮಟ್ಟದ ಕ್ರೀಡಾಕೂಟದ ಅಥ್ಲೆಟಿಕ್ಸ್ ನಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಅಥ್ಲೆಟಿಕ್ಸ್ ಕ್ರೀಡಾಪಟುಗಳಾದ *ಅದಿತಿ ಹೆಮ್ಮಣ್ಣ, ಪೂಜಿತಾ, ಧ್ರುವ ಭಾಗವತ್, ವಿನಿಷ, ನಿಷ್ಮ, ಭೈರವಿ ಇವರುಗಳನ್ನು ಸನ್ಮಾನಿಸಲಾಯಿತು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆಯ ಶೈಕ್ಷಣಿಕ ಸಂಯೋಜಿತ ಸಂಸ್ಥೆಯ 5 ಸಂಸ್ಥೆಗಳಿಂದ 55 ಬಾಲಕರು,37 ಬಾಲಕಿಯರು ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು , ಗುರೂಜಿ ಮಾತಾಜಿಯವರು ಜಿಲ್ಲಾ ಸಮಿತಿ ಯವರು ಸೇರಿದಂತೆ ಒಟ್ಟು 115 ಮಂದಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಕಾಶ್ ಆಚಾರ್ಯ ಸ್ವಾಗತಿಸಿದರು. ಜಿಲ್ಲಾ ಶಾರೀರಿಕ ಪ್ರಮುಖ್ ವಿಜಯ ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಧಿಕಾ ಎಸ್ ವಂದಿಸಿದರು. ವಿಘ್ನೇಶ್ ಜಿ.ಎಲ್ ಕಾರ್ಯಕ್ರಮ ನಿರೂಪಿಸಿದರು. ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ,ಪ್ರಮಾಣಪತ್ರ ವಿತರಿಸಲಾಯಿತು.