ಕೋಳಿ ಅಂಕ ಜೂಜಾಟ ಬಯಲು : ಧರ್ಮಸ್ಥಳ ಪೊಲೀಸರ ಕಾರ್ಯಾಚರಣೆಯಲ್ಲಿ ಇಬ್ಬರು ಸೆರೆ

0
7

ಬೆಳ್ತಂಗಡಿ : ತಾಲೂಕಿನ ಬಂದಾರು ಗ್ರಾಮದ ನಿರ್ಮುಡ ಪ್ರದೇಶದಲ್ಲಿ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಸುತ್ತಿದ್ದ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಗಸ್ಟ್ 3ರಂದು ಸಂಜೆ ಸುಮಾರು 5.15ರ ವೇಳೆಗೆ ಬೀಟ್ ಸಿಬ್ಬಂದಿಯಿಂದ ಬಂದ ಖಚಿತ ಮಾಹಿತಿಯ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಮರ್ಥ್ ಆರ್. ಗಾಣಿಗೇರ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ಪಂಚರೊಂದಿಗೆ ನಿರ್ಮುಡ ಪ್ರದೇಶಕ್ಕೆ ದಾಳಿ ನಡೆಸಿತು. ಈ ವೇಳೆ ಅಕ್ರಮವಾಗಿ ಕೋಳಿ ಅಂಕ ಜೂಜಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಪೊಲೀಸರನ್ನು ಕಂಡ ತಕ್ಷಣ ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದು, ಧರ್ಣಪ್ಪ ಗೌಡ (38) ಹಾಗೂ ಹರೀಶ್ ಎಸ್. (30) ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪರಾರಿಯಾದ ಇತರರ ಪತ್ತೆಗಾಗಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ದಾಳಿ ವೇಳೆ ಜೂಜಾಟಕ್ಕೆ ಬಳಸಲಾಗಿದ್ದ ₹350 ನಗದು, ಎರಡು ಬಾಳು, ವಿವಿಧ ಜಾತಿಯ ನಾಲ್ಕು ಕೋಳಿಗಳು ಹಾಗೂ ಮೂರು ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು ₹74,370 ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.