ಆಲೂರಿನಲ್ಲಿ ಅ.4ರಂದು ‘ಚಿತ್ರಕೂಟ ಆಯುರ್ವೇದ ಹಬ್ಬ–2026’

0
20

ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆಲೂರಿನ ಕಳಿಯಲ್ಲಿರುವ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಆಯುಷ್ ಇಲಾಖೆಯ ಸಹಯೋಗದೊಂದಿಗೆ ಅಕ್ಟೋಬರ್ 4ರಂದು ‘ಚಿತ್ರಕೂಟ ಆಯುರ್ವೇದ ಹಬ್ಬ–2026’ ಆಯೋಜಿಸಲಾಗಿದೆ. ಬೆಳಗ್ಗೆ 7ರಿಂದ ಸಂಜೆ 6ರವರೆಗೆ ನಡೆಯಲಿರುವ ಹಬ್ಬಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಯುರ್ವೇದ ಹಾಗೂ ಗ್ರಾಮೀಣ ಆರೋಗ್ಯ ಪರಂಪರೆಯ ವಿವಿಧ ಆಯಾಮಗಳನ್ನು ಪರಿಚಯಿಸಲಾಗುವುದು ಎಂದು ಚಿಕಿತ್ಸಾಲಯದ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ತಿಳಿಸಿದ್ದಾರೆ.

ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಒತ್ತಡದ ಜೀವನಶೈಲಿ, ಪ್ಯಾಕೆಟ್ ಆಹಾರ ಹಾಗೂ ನಿರಂತರ ಕೆಲಸದ ಒತ್ತಡದ ನಡುವೆ ಆಯುರ್ವೇದದ ನೈಜ ಜೀವನಪದ್ಧತಿಯನ್ನು ಗ್ರಾಮೀಣ ಪರಿಸರದಲ್ಲಿ ಪರಿಚಯಿಸುವ ಉದ್ದೇಶದಿಂದ ಹಬ್ಬ ಆಯೋಜಿಸಲಾಗಿದೆ ಎಂದರು. ‘ಹಳ್ಳಿಯ ಮಡಿಲಲ್ಲಿ ಆರೋಗ್ಯ ಹಬ್ಬ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟೆಹೊಳೆ ಉದ್ಘಾಟಿಸಲಿದ್ದು, ವಿವಿಧ ಕ್ಷೇತ್ರಗಳ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಸ್ವರ್ಣಕಮಲ ಪುರಸ್ಕೃತ ಚಿತ್ರ ವಿಮರ್ಶಕ ಡಾ. ಪ್ರದೀಪ್ ಕೆಂಚನೂರು ಅವರಿಗೆ ಗೌರವ ಸನ್ಮಾನ ನಡೆಯಲಿದೆ.

ಉಚಿತ ನಾಡಿ ಪರೀಕ್ಷೆ, ಪ್ರಕೃತಿ ವಿಶ್ಲೇಷಣೆ

ಹಬ್ಬದಲ್ಲಿ ಆಯುರ್ವೇದ ತಜ್ಞ ವೈದ್ಯರಿಂದ ಉಚಿತ ನಾಡಿ ಪರೀಕ್ಷೆ ಹಾಗೂ ವಾತ, ಪಿತ್ತ, ಕಫ ಪ್ರಕೃತಿ ವಿಶ್ಲೇಷಣೆ ನಡೆಸಲಾಗುತ್ತದೆ. ಇದರೊಂದಿಗೆ ವೈಯಕ್ತಿಕ ಆಹಾರ ಪದ್ಧತಿ ಮತ್ತು ಜೀವನಶೈಲಿಗೆ ಸಂಬಂಧಿಸಿದ ಮಾರ್ಗದರ್ಶನ ನೀಡಲಾಗುವುದು.

18 ಎಕರೆ ಹಸಿರು ಪರಿಸರದಲ್ಲಿರುವ ಚಿತ್ರಕೂಟದಲ್ಲಿ ನಾಗಕೇಸರ, ರಕ್ತಚಂದನ, ಏಕನಾಯಕ, ರುದ್ರಾಕ್ಷಿ ಸೇರಿದಂತೆ 150ಕ್ಕೂ ಅಧಿಕ ಅಪರೂಪದ ಔಷಧೀಯ ಸಸ್ಯಗಳ ಪರಿಚಯ ನಡಿಗೆ, ದೇಸಿ ಗೋಶಾಲೆ ಭೇಟಿ, ಗೋಸಂಸ್ಕೃತಿಯ ಪರಿಚಯ, ಪಂಚಕರ್ಮ ಚಿಕಿತ್ಸಾ ವಿಧಾನಗಳ ಮಾಹಿತಿ ಹಾಗೂ ಔಷಧೀಯ ಗಿಡಮೂಲಿಕೆಗಳಿಂದ ಕಷಾಯ ತಯಾರಿಕೆಯ ನೇರ ಪ್ರಾತ್ಯಕ್ಷಿಕೆ ನಡೆಯಲಿದೆ. ಮಕ್ಕಳಿಗೆ ಔಷಧೀಯ ಸಸಿಗಳನ್ನೂ ವಿತರಿಸಲಾಗುತ್ತದೆ.

ಸಾವಯವ ಮಳಿಗೆ, ಸಾಂಪ್ರದಾಯಿಕ ಆಹಾರ ವಿಶೇಷ

ಪ್ರಕೃತಿ ಸ್ನೇಹಿ ಜೀವನಶೈಲಿಗೆ ಉತ್ತೇಜನ ನೀಡುವ ಸಾವಯವ ಮಳಿಗೆಗಳು ಹಬ್ಬದ ಪ್ರಮುಖ ಆಕರ್ಷಣೆಯಾಗಲಿವೆ. ಔಷಧೀಯ ಉತ್ಪನ್ನಗಳು, ನೈಸರ್ಗಿಕ ಮಸಾಜ್ ಉತ್ಪನ್ನಗಳು, ದೇಸಿ ಗೋಉತ್ಪನ್ನಗಳು, ಸಾವಯವ ಧಾನ್ಯಗಳು, ದೇಸಿ ತರಕಾರಿ ಬೀಜಗಳು, ಸ್ವದೇಶಿ ಉತ್ಪನ್ನಗಳು, ಉಪ್ಪಿನಕಾಯಿ, ಮಣ್ಣಿನ ಮಡಕೆಗಳು, ಮರದ ಗೃಹೋಪಯೋಗಿ ವಸ್ತುಗಳು ಹಾಗೂ ಗ್ರಾಮೀಣ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.

ಆರೋಗ್ಯ ಮತ್ತು ರುಚಿಯ ಸಂಯೋಜನೆಯಾಗಿ ವಿಶೇಷ ಆಯುರ್ವೇದ ಥಾಲಿಯನ್ನು ಸಣ್ಣ ಮೊತ್ತಕ್ಕೆ ನೀಡಲಾಗುತ್ತದೆ. ಸಾಂಪ್ರದಾಯಿಕ ಧಾನ್ಯ, ಸೊಪ್ಪು, ಕಾಳು ಹಾಗೂ ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾದ ವಿವಿಧ ಖಾದ್ಯಗಳು ಇದರಲ್ಲಿರಲಿವೆ.

ವಿದ್ಯಾರ್ಥಿಗಳಿಗೆ ಸ್ಪರ್ಧೆಗಳು

ಶಾಲಾ ವಿದ್ಯಾರ್ಥಿಗಳಿಗಾಗಿ ಪ್ರಬಂಧ, ಭಾಷಣ ಹಾಗೂ ಚಿತ್ರಕಲೆ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಪ್ರತಿ ವಿಭಾಗದ ಪ್ರಥಮ ಬಹುಮಾನವಾಗಿ ₹3,000 ಹಾಗೂ ದ್ವಿತೀಯ ಬಹುಮಾನವಾಗಿ ₹2,000 ನೀಡಲಾಗುತ್ತದೆ. ‘ಪ್ರಸ್ತುತ ಕಾಲಘಟ್ಟದಲ್ಲಿ ಆಯುರ್ವೇದದ ಮಹತ್ವ’, ‘ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಸಾಂಪ್ರದಾಯಿಕ ಆಹಾರ ಮತ್ತು ಆಯುರ್ವೇದದ ಪಾತ್ರ’ ಹಾಗೂ ‘ಪ್ರಕೃತಿ ಮತ್ತು ಆಯುರ್ವೇದ’ ವಿಷಯಗಳ ಮೇಲೆ ಸ್ಪರ್ಧೆಗಳು ನಡೆಯಲಿವೆ.

ಇದರೊಂದಿಗೆ #Chithrakoota GenZ Ayurveda ಹೆಸರಿನಲ್ಲಿ ಯುವಜನತೆ, ವೈದ್ಯರು ಹಾಗೂ ವಿಷಯ ರಚನೆಕಾರರ ನಡುವೆ ಮುಕ್ತ ಸಂವಾದವೂ ನಡೆಯಲಿದೆ. ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.

30ಕ್ಕೂ ಅಧಿಕ ದೇಶಗಳ ರೋಗಿಗಳಿಗೆ ಚಿಕಿತ್ಸೆ

ಡಾ. ರಾಜೇಶ್ ಬಾಯರಿ ಅವರು 2008ರಲ್ಲಿ ಅಡಿಪಾಯ ಹಾಕಿ, 2010ರಲ್ಲಿ ಆರಂಭಿಸಿದ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯವು ಪ್ರಸ್ತುತ 18 ಎಕರೆ ಹಸಿರು ಪರಿಸರದಲ್ಲಿ ಕಾರ್ಯನಿರ್ವಹಿಸುತ್ತಿದೆ. ದೇಸಿ ಗೋಶಾಲೆ, ಸ್ವಂತ ಔಷಧಾಲಯ, ಯೋಗ-ಧ್ಯಾನ ಸೇರಿದಂತೆ ವಿವಿಧ ಆಯುರ್ವೇದ ಸೇವೆಗಳನ್ನು ಇಲ್ಲಿ ನೀಡಲಾಗುತ್ತಿದ್ದು, 30ಕ್ಕೂ ಅಧಿಕ ದೇಶಗಳ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯ, ಆಲೂರು, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಸಂಪರ್ಕಿಸಬಹುದು. ದೂರವಾಣಿ: 9187471578.