ರಜೆಯ ಮೇಲೆ ಬಂದಿದ್ದ ಸಿಐಎಸ್ಎಫ್ ಯೋಧ ರಸ್ತೆ ಅಪಘಾತದಲ್ಲಿ ಮೃತ

0
76

ಕಡಬ : ಜಮ್ಮುವಿನಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕರಾವಳಿಯ ಯೋಧನೊಬ್ಬ ರಜೆಯ ಮೇಲೆ ಊರಿಗೆ ಬಂದಿದ್ದ ವೇಳೆ ಮಂಗಳೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ನಡೆದಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ಪುತ್ಯೆ ನಿವಾಸಿ ಸೀತಾರಾಮ ಗೌಡ ಅವರು ಜಮ್ಮುವಿನ ಸೆಂಟ್ರಲ್ ಜೈಲಿನಲ್ಲಿ ಸಿಐಎಸ್ಎಫ್ ಜವಾನರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಜುಲೈ 3ರಂದು ರಜೆ ನಿಮಿತ್ತ ಊರಿಗೆ ಆಗಮಿಸಿದ್ದ ಅವರು, ಜುಲೈ 8ರಂದು ಬೈಕ್‌ನಲ್ಲಿ ಮಂಗಳೂರಿಗೆ ಬಂದಿದ್ದರು.

ಸಂಜೆ ರಾಷ್ಟ್ರೀಯ ಹೆದ್ದಾರಿ-66ರ ಕೆಪಿಟಿ ಸಮೀಪದ ರೇಡಿಯಂಟ್ ಸ್ಟಾರ್ ಹೋಟೆಲ್ ಬಳಿ ತಲುಪಿದ ವೇಳೆ ಅಪಘಾತ ಸಂಭವಿಸಿದೆ. ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಮಂಗಳೂರಿನ ಖಾಸಗಿ ಎ.ಜೆ. ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಮೃತರ ಪತ್ನಿ ರೋಹಿಣಿ ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳೂರು ಟ್ರಾಫಿಕ್ ಈಸ್ಟ್ (ಕದ್ರಿ) ಪೊಲೀಸ್ ಠಾಣೆಯಲ್ಲಿ ಬಿಎನ್‌ಎಸ್ ಸೆಕ್ಷನ್ 281, 106(1) ಹಾಗೂ ಐಎಂವಿ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದೆ.

ಅಪಘಾತವು ಬೈಕ್ ನಿಯಂತ್ರಣ ತಪ್ಪಿ ಸ್ವಯಂ ಸ್ಕಿಡ್ ಆಗಿದ್ದರಿಂದ ಸಂಭವಿಸಿದೆಯೇ ಅಥವಾ ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆಯೇ ಎಂಬ ಕುರಿತು ಸಮಗ್ರ ತನಿಖೆ ನಡೆಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವ ಮೂಲಕ ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯಕ್ಕೆ ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here