ಸೆ.18ಕ್ಕೆ ತೆರೆಗೆ ‘ಸಿಟಿ ಲೈಟ್ಸ್’ ; ದುನಿಯಾ ವಿಜಯ್ ನಿರ್ದೇಶನದಲ್ಲಿ ವಿನಯ್ ರಾಜ್‌ಕುಮಾರ್–ಮೊನಿಷಾ ಜೋಡಿ

0
7

ಬೆಂಗಳೂರು : ನಟ, ನಿರ್ದೇಶಕ ದುನಿಯಾ ವಿಜಯ್ ಅವರ ಮೂರನೇ ನಿರ್ದೇಶನದ ಸಿನಿಮಾ ‘ಸಿಟಿ ಲೈಟ್ಸ್’ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಸೆಪ್ಟೆಂಬರ್ 18ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದ್ದು, ಈ ಚಿತ್ರದ ಮೂಲಕ ನಟ ವಿನಯ್ ರಾಜ್‌ಕುಮಾರ್ ಮತ್ತು ದುನಿಯಾ ವಿಜಯ್ ಅವರ ಪುತ್ರಿ ಮೊನಿಷಾ ಮೊದಲ ಬಾರಿಗೆ ಜೋಡಿಯಾಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

ದುನಿಯಾ ವಿಜಯ್ ಈ ಹಿಂದೆ ನಿರ್ದೇಶಿಸಿದ್ದ ಎರಡೂ ಚಿತ್ರಗಳಲ್ಲಿ ತಾವೇ ನಾಯಕನಾಗಿ ನಟಿಸಿದ್ದರು. ಆದರೆ ಇದೇ ಮೊದಲ ಬಾರಿಗೆ ಮತ್ತೊಬ್ಬ ನಾಯಕನಿಗಾಗಿ ನಿರ್ದೇಶನ ಮಾಡಿರುವ ಚಿತ್ರ ಎಂಬ ವಿಶೇಷತೆ ‘ಸಿಟಿ ಲೈಟ್ಸ್’ಗಿದೆ. ಚಾರ್ಲಿ ಚಾಪ್ಲಿನ್ ಅವರ ಜನಪ್ರಿಯ ಚಿತ್ರದಿಂದಲೇ ಶೀರ್ಷಿಕೆ ಪಡೆದಿರುವ ಈ ಸಿನಿಮಾ ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ.

ಈ ಚಿತ್ರದ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೊನಿಷಾ ಚಿತ್ರರಂಗಕ್ಕೆ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ವಿಜಯ್ ಅವರ ಮತ್ತೊಬ್ಬ ಪುತ್ರಿ ರಿತನ್ಯಾ ಈಗಾಗಲೇ ಲ್ಯಾಂಡ್ ಲಾರ್ಡ್ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದಾರೆ.

ನಗರ ಜೀವನದ ಹಲವು ಆಯಾಮಗಳನ್ನು ಅನಾವರಣಗೊಳಿಸುವ ಕಥಾಹಂದರವನ್ನು ಹೊಂದಿರುವ ‘ಸಿಟಿ ಲೈಟ್ಸ್’ ಬೆಂಗಳೂರು ನಗರದ ಸ್ಲಂ ಪ್ರದೇಶಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ. ನೈಜತೆಯ ಸ್ಪರ್ಶ ಹೊಂದಿರುವ ಪ್ರೇಮಕಥೆಯಾಗಿ ಸಿನಿಮಾ ಮೂಡಿಬಂದಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರಕ್ಕೆ ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದು, ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಟ ಕಾಕ್ರೂಚ್ ಸುಧಿ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಚಿತ್ರವನ್ನು ಕೆವಿಎನ್ ಪ್ರೊಡಕ್ಷನ್ಸ್ ವಿತರಣೆ ಮಾಡುತ್ತಿದ್ದು, ಆನಂದ್ ಆಡಿಯೋ ಚಿತ್ರದ ಸಂಗೀತ ಹಕ್ಕುಗಳನ್ನು ಪಡೆದುಕೊಂಡಿದೆ. ಸೆಪ್ಟೆಂಬರ್ 18ರಂದು ‘ಸಿಟಿ ಲೈಟ್ಸ್’ ಪ್ರೇಕ್ಷಕರ ಮುಂದೆ ಬರಲಿದ್ದು, ಚಿತ್ರದ ಮೇಲೆ ಈಗಾಗಲೇ ಸಿನಿಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿದೆ.