ಪ್ರತಿಭಟನೆಗೆ ದಿನಾಂಕ ನಿಗದಿಪಡಿಸಿ, ಇಲ್ಲವಾದರೆ ಮತ್ತೊಂದು ಹೋರಾಟ : ಕಾಕ್ರೋಚ್‌ ಜನತಾ ಪಕ್ಷ ಎಚ್ಚರಿಕೆ

0
30

ನವದೆಹಲಿ : ದೆಹಲಿಯ ಜಂತರ್‌ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ದಿನಾಂಕ ನಿಗದಿಪಡಿಸುವಂತೆ ಕಾಕ್ರೋಚ್‌ ಜನತಾ ಪಕ್ಷದ ನಾಯಕರಾದ ಅಶುತೋಶ್‌ ರಂಕಾ ಹಾಗೂ ಸೌರವ್‌ ದಾಸ್‌ ಅವರು ಸೋಮವಾರ ದೆಹಲಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಪ್ರತಿಭಟನೆಗೆ ಅನುಮತಿ ನೀಡುವ ಕುರಿತು ನಿರ್ಧಾರ ಕೈಗೊಳ್ಳಲು ಪೊಲೀಸರಿಗೆ 24 ಗಂಟೆಗಳ ಗಡುವು ನೀಡಿದ್ದಾರೆ.

ನಿಗದಿತ ಅವಧಿಯೊಳಗೆ ಪ್ರತಿಭಟನೆಗೆ ದಿನಾಂಕ ನೀಡದಿದ್ದರೆ, ಮತ್ತೊಮ್ಮೆ ಪ್ರತಿಭಟನೆಗೆ ಕರೆ ನೀಡುವುದಾಗಿ ನಾಯಕರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಗೆ ಅನುಮತಿ: ಪೊಲೀಸರಿಗೆ ಹೈಕೋರ್ಟ್‌ ಸೂಚನೆ

ಜಂತರ್‌ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಅನುಮತಿ ಕೋರಿ ಯುವ ಕಾಂಗ್ರೆಸ್‌ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ, ಮಂಗಳವಾರದೊಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ದೆಹಲಿ ಹೈಕೋರ್ಟ್‌ ಪೊಲೀಸರಿಗೆ ಸೂಚಿಸಿದೆ. ಪ್ರತಿಭಟನೆಗೆ ಅನುಮತಿ ನೀಡುವ ವಿಚಾರ ನ್ಯಾಯಾಲಯದ ಗಮನ ಸೆಳೆದಿದ್ದು, ಪೊಲೀಸರ ಮುಂದಿನ ನಿಲುವು ಕುತೂಹಲ ಮೂಡಿಸಿದೆ.

ಸಿಇಸಿಯನ್ನು ರಕ್ಷಿಸಲು ಮೋದಿ ಸರ್ಕಾರ ಜನರ ವಿರುದ್ಧ ಯುದ್ಧ ಸಾರಿದೆ: ಅಭಿಜಿತ್‌ ದೀಪ್ಕೆ ಆರೋಪ

ಛತ್ರಪತಿ ಸಂಭಾಜಿನಗರ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್‌ ಕುಮಾರ್‌ ಅವರನ್ನು ರಕ್ಷಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ನಾಗರಿಕರ ವಿರುದ್ಧವೇ ಯುದ್ಧ ಸಾರಿದ್ದಾರೆ ಎಂದು ಸಿಜೆಪಿ ಸ್ಥಾಪಕ ಅಭಿಜಿತ್‌ ದೀಪ್ಕೆ ಆರೋಪಿಸಿದ್ದಾರೆ.

ದೆಹಲಿಯಲ್ಲಿ ಪ್ರತಿಭಟನಾಕಾರರು, ಮಾಧ್ಯಮ ಪ್ರತಿನಿಧಿಗಳು, ಸುಪ್ರೀಂ ಕೋರ್ಟ್‌ ವಕೀಲರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಈ ಬೆಳವಣಿಗೆಗಳ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮನ್ನು ವಶಕ್ಕೆ ಪಡೆದ ಸಂದರ್ಭದಲ್ಲಿ ದೆಹಲಿ ಪೊಲೀಸರು ತನಗೆ ಹಾಗೂ ತನ್ನ ಕುಟುಂಬದ ಸದಸ್ಯರಿಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದೂ ದೀಪ್ಕೆ ದೂರಿದ್ದಾರೆ. ಅಲ್ಲದೆ, ತಮ್ಮನ್ನು ಬಂಧಿಸಿರುವ ವಿಚಾರವಾಗಲಿ, ತಮ್ಮನ್ನು ಎಲ್ಲಿ ಇರಿಸಲಾಗಿದೆ ಎಂಬ ಮಾಹಿತಿಯಾಗಲಿ ಸಂಬಂಧಿಕರಿಗೆ ಅಥವಾ ವಕೀಲರಿಗೆ ತಿಳಿಸಿರಲಿಲ್ಲ ಎಂದು ಆರೋಪಿಸಿದ್ದಾರೆ.