ಕಾರ್ಕಳ: ಮಲೇಷ್ಯಾದಲ್ಲಿ ಉದ್ಯೋಗ ತೆಗೆಸಿ ಕೊಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ರೂ. ವಂಚಿಸಿದ ಘಟನೆ ಕಾರ್ಕಳದಲ್ಲಿ ನಡೆದಿದೆ.
ಆರೋಪಿಯಾದ ಮೋಹಿತ್ ಬೆಂಗಳೂರು ಮತ್ತು ಕಾರ್ಕಳ ಬಜಗೋಳಿ ನಿವಾಸಿ ಕೃಷ್ಣ ಕುಲಾಲ್ ಅವರು ಕಾರ್ಕಳದ ಮಿಯಾರಿನಲ್ಲಿ ಫೋಟೋಗ್ರಫಿ ವೃತ್ತಿ ನಡೆಸುತ್ತಿದ್ದ ಪ್ರಕಾಶ್ ಆಚಾರ್ಯ ಎಂಬವರಿಗೆ ವಂಚಿಸಿದ್ದಾರೆ ಎಂದು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕಾಶ್ ಅವರಿಗೆ ಮಲೇಷ್ಯಾದ ರೆಸ್ಟೋರೆಂಟ್ ಒಂದರಲ್ಲಿ ಕೆಲಸ ತೆಗೆಸಿಕೊಡುವುದಾಗಿ ಆರೋಪಿಗಳು ನಂಬಿಸಿ ಅವರಿಂದ ಹಣ ಪಡೆದು, ಮಲೇಷ್ಯಾಕ್ಕೆ ತೆರಳಲು ಖರ್ಚು, ಟಿಕೆಟ್ ಹಣವನ್ನು ನೀಡುವಂತೆ ಹೇಳಿದರು. ಅದರಂತೆ ಪ್ರಕಾಶ್ ಅವರು ಮೋಹಿತ್ ಅವರ ಖಾತೆಗೆ 85,000 ರೂ. ಮತ್ತು ಕೃಷ್ಣ ಕುಲಾಲ್ ಅವರ ಖಾತೆಗೆ 1 ಲಕ್ಷ 40,000 ರೂ ಕಳುಹಿಸಿರುತ್ತಾರೆ.
ಆದರೆ ಆರೋಪಿಗಳು ಹಣ ಪಡೆದು ಮಲೇಷ್ಯಾಗೆ ಟಿಕೆಟ್ ಮತ್ತು ವಿಸಾ ಕಳಿಸಿದ್ದು, ಪ್ರಕಾಶ್ ಅವರು ಮಲೇಷ್ಯಾಗೆ ಹೋದಾಗ ಅಲ್ಲಿಯ ಏರ್‌ಪೋರ್ಟ್‌ನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಅವರಿಗೆ ನೀಡಲಾದ ವೀಸಾ, ಟಿಕೆಟ್ ಸೇರಿದಂತೆ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದು ಬಂದಿದೆ. ಜೊತೆಗೆ ಪ್ರಕಾಶ್ ಅವರು ಮಲೇಷ್ಯಾದಲ್ಲಿದ್ದ ಸಂದರ್ಭದಲ್ಲಿ ಮನ್ವೀರ್ ಸಿಂಗ್ ಎಂಬ ಏಜೆಂಟ್ ಸಹ ಮೂವತೈದು ಸಾವಿರ ರೂ. ಪಡೆದು ವಂಚಿಸಿದ್ದಾನೆ.
ಈ ಸಂಬಂಧ ಕಾರ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

