ಜಿಲ್ಲಾಸ್ಪತ್ರೆ ಉದ್ಘಾಟನೆಗೆ ಆಗ್ರಹಿಸಿ ಕರವೇ ಧರಣಿ ಪ್ರಾರಂಭ

0
12

ಉಡುಪಿ: ನೂತನ ಜಿಲ್ಲಾಸ್ಪತ್ರೆ ನಿಮಾರ್ಣಗೊಂಡು ವರ್ಷ ಕಳೆದರೂ ಇನ್ನೂ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ಮೊದಲ ಮೂರು ದಿನಗಳ ಧರಣಿ ಸಾಂಕೇತಿಕವಾಗಿದ್ದು, ಬಳಿಕ ಸಂಘಟನೆಯ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹ ನಡೆಸಲಿದ್ದೇವೆ. ಏಳು ದಿನಗಳೊಳಗೆ ಜಿಲ್ಲಾಡಳಿತ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕರವೇ ಗೌರವಾಧ್ಯಕ್ಷ ಅನ್ಸರ್​ ಅಹಮದ್​ ಎಚ್ಚರಿಸಿದರು.

ಅಜ್ಜರಕಾಡಿನ ನೂತನ ಜಿಲ್ಲಾಸ್ಪತ್ರೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್​ ಶೆಟ್ಟಿ ಬಣ) ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗುರುವಾರ ಆಸ್ಪತ್ರೆ ಮುಂಭಾಗ ಏಳು ದಿನಗಳ ಅಹೋರಾತ್ರಿ ಧರಣಿಗೆ ಚಾಲನೆ ನೀಡಿ ಮಾತನಾಡಿದರು.
ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ನಿದ್ದೆಯಲ್ಲಿರುವ ಸರ್ಕಾರವನ್ನು ಬಡಿದೆಬ್ಬಿಸುವ ಕಾರ್ಯ ಮಾಡುತ್ತಿದ್ದೇವೆ. ಆಸ್ಪತ್ರೆಯಲ್ಲಿ ಅಗತ್ಯ ಯಂತ್ರೋಪಕರಣ, ವೈದ್ಯರು, ದಾದಿಯರು ಹಾಗೂ ಇತರ ಸಿಬ್ಬಂದಿಯನ್ನು ತಕ್ಷಣ ನಿಯೋಜಿಸಿ ಸೇವೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕರವೇ ರಾಜ್ಯ ಸಂಚಾಲಕ ಪ್ರಸನ್ನ ಶೆಟ್ಟಿ ಮಾತನಾಡಿ, ಯಾವುದೇ ಖಾಸಗಿ ಲಾಬಿಗೆ ಮಣಿಯದೆ ರಾಜ್ಯ ಸರ್ಕಾರ ಕೂಡಲೇ ನೂತನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕಿಯ ಸೇವೆ ಆರಂಭಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಸಯ್ಯದ್​ ನಿಯಾಜ್​, ದೇವಕಿ ಬಾರಕೂರು, ಜಿಲ್ಲಾಧ್ಯಕ್ಷ ಸುಧೀರ್​ ಪೂಜಾರಿ, ತಾಲೂಕು ಅಧ್ಯಕ್ಷ ಸತೀಶ್​ ಸನಿಲ್​ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿ ಗಂಟೆಗೊಮ್ಮೆ ಜಾಗಟೆ ಹಾಗೂ ಗಂಟೆ ಬಾರಿಸುವ ಮೂಲಕ ಸರ್ಕಾರ ಹಾಗೂ ಜಿಲ್ಲಾಡಳಿತವನ್ನು ಎಚ್ಚರಿಸಲಾಯಿತು.