ಮೂಡುಬಿದಿರೆ : ನಿರಂತರ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಮೂಡುಬಿದಿರೆಯ ಜೈನ್ ಪೇಟೆ ಸಮೀಪದ ಮನೆಯೊಂದರ ಕಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ. ಗೋಡೆ ಕುಸಿದ ಪರಿಣಾಮ ಕಲ್ಲುಗಳು ರಸ್ತೆಯ ಮೇಲೆ ಚದುರಿಬಿದ್ದಿದ್ದು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಭಾರೀ ಮಳೆಯಿಂದ ಗೋಡೆಯ ಅಡಿಪಾಯ ದುರ್ಬಲಗೊಂಡಿರುವ ಸಾಧ್ಯತೆಯಿಂದ ಏಕಾಏಕಿ ಗೋಡೆ ಕುಸಿದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅದೃಷ್ಟವಶಾತ್ ಘಟನೆ ಸಂಭವಿಸಿದ ವೇಳೆ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.
ನಿರಂತರ ಮಳೆಯ ಹಿನ್ನೆಲೆ ಹಳೆಯ ಕಟ್ಟಡಗಳು, ಕಂಪೌಂಡ್ ಗೋಡೆಗಳು ಹಾಗೂ ಅಪಾಯದ ಸ್ಥಿತಿಯಲ್ಲಿರುವ ನಿರ್ಮಾಣಗಳ ಸಮೀಪ ಸಾರ್ವಜನಿಕರು ಎಚ್ಚರಿಕೆಯಿಂದ ಸಂಚರಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳು ಮತ್ತು ಗೋಡೆಗಳ ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿದೆ.

