ಪಾಂಡೇಶ್ವರ ರೈಲ್ವೇ ಯೋಜನೆ ಏನು? ವಾಸ್ತವಾಂಶ ಬಹಿರಂಗಪಡಿಸಲು ಒತ್ತಾಯ

0
6

ಮಂಗಳೂರು : ಪಾಂಡೇಶ್ವರ–ಗೂಡ್ಸ್ ಶೆಡ್ ಪ್ರದೇಶದಲ್ಲಿ ನಡೆಯುತ್ತಿರುವ ರೈಲ್ವೇ ಇಲಾಖೆಯ ಅಭಿವೃದ್ಧಿ ಕಾಮಗಾರಿಗಳು ಹಾಗೂ ಈ ಭಾಗದಲ್ಲಿ ವರ್ಷಗಳಿಂದ ಎದುರಾಗಿರುವ ರೈಲ್ವೇ ಕ್ರಾಸಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಕುರಿತು ಸಮಗ್ರ ವರದಿ ಮಾಡಿ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ (ರಿ.) ಸಮೂಹ ಮಾಧ್ಯಮಗಳಿಗೆ ಮನವಿ ಮಾಡಿದೆ.

ಟ್ರಸ್ಟ್ ಅಧ್ಯಕ್ಷ ಸೀತಾರಾಮ್ ಎ. ಅವರು ಈ ಕುರಿತು ಪ್ರಕಟಣೆ ನೀಡಿದ್ದು, ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಾಂಡೇಶ್ವರ–ಗೂಡ್ಸ್ ಶೆಡ್ ಪ್ರದೇಶದಲ್ಲಿ ಹೆಚ್ಚುವರಿ ರೈಲುಗಳನ್ನು ನಿಲ್ಲಿಸುವ ಬದಲು ಕಂಕನಾಡಿ/ಪಡೀಲ್ ಭಾಗಕ್ಕೆ ಸ್ಥಳಾಂತರಿಸುವ ಬಗ್ಗೆ ಚರ್ಚೆ ನಡೆದಿತ್ತು. ಅಲ್ಲದೆ, ರೈಲ್ವೇ ಜಾಗವನ್ನು ಜಿಲ್ಲಾಡಳಿತದೊಂದಿಗೆ ವಿನಿಮಯ (Swap) ಮಾಡುವ ಪ್ರಸ್ತಾಪ ಹಾಗೂ ಪಾಂಡೇಶ್ವರ ರಸ್ತೆಯನ್ನು ನಾಲ್ಕು ಲೇನ್‌ಗಳಾಗಿ ಅಭಿವೃದ್ಧಿಪಡಿಸುವ ಯೋಜನೆಯ ಬಗ್ಗೆಯೂ ಅಧಿಕಾರಿಗಳು ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದಾರೆ.

ಪ್ರಸ್ತುತ ಗೂಡ್ಸ್ ಶೆಡ್ ಪ್ರದೇಶದಲ್ಲಿ ಹಳೆಯ ಕಟ್ಟಡಗಳನ್ನು ತೆರವುಗೊಳಿಸಿ, ರೈಲ್ವೇ ಹಳಿಯ ಸಮೀಪ ಭೂಮಿ ಸಮತಟ್ಟು ಮಾಡುವ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಇಲ್ಲಿ ಹೊಸ ರೈಲು ಹಳಿ ನಿರ್ಮಾಣವಾಗುತ್ತಿದೆಯೇ ಅಥವಾ ಹೆಚ್ಚುವರಿ ರೈಲುಗಳ ಸಂಚಾರಕ್ಕೆ ಸಿದ್ಧತೆ ನಡೆಯುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ ಎಂದು ಅವರು ಹೇಳಿದ್ದಾರೆ.

ಈ ಕುರಿತು ಜಿಲ್ಲಾಧಿಕಾರಿ, ಸಂಸದರು, ಉಸ್ತುವಾರಿ ಸಚಿವರು, ಮಹಾನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆಗೆ ಟ್ರಸ್ಟ್ ವತಿಯಿಂದ ಪತ್ರ ಬರೆಯಲಾಗಿದ್ದು, ಉತ್ತರಕ್ಕಾಗಿ ಕಾಯುತ್ತಿರುವುದಾಗಿ ತಿಳಿಸಿದ್ದಾರೆ.

ಸಾರ್ವಜನಿಕ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ, ನಡೆಯುತ್ತಿರುವ ಕಾಮಗಾರಿಗಳ ವಾಸ್ತವಾಂಶ ಮತ್ತು ಮುಂದಿನ ಯೋಜನೆಗಳ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡುವಂತೆ ಸಮೂಹ ಮಾಧ್ಯಮಗಳಿಗೆ ಶ್ರೀ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ಮನವಿ ಮಾಡಿದೆ.