ಮಂಗಳೂರು : ಇತ್ತೀಚೆಗೆ ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ “Kalyug Kalki Post” ಎಂಬ ಶೀರ್ಷಿಕೆಯಡಿ ಹರಿದಾಡುತ್ತಿರುವ ದುರುದ್ದೇಶಪೂರಿತ ಹಾಗೂ ಪ್ರಚೋದನಾತ್ಮಕ ಪೋಸ್ಟ್‌ಗಳು ಸಾರ್ವಜನಿಕ ಶಾಂತಿ ಮತ್ತು ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ಉಂಟುಮಾಡುವಂತಿವೆ ಎಂದು ಕಂಕನಾಡಿ ಗರೋಡಿ ಕ್ಷೇತ್ರದ ಪದಾಧಿಕಾರಿಗಳು ಖಂಡಿಸಿದ್ದಾರೆ.
ಈ ಪೋಸ್ಟ್‌ನಲ್ಲಿರುವ ವಿಷಯವು ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವುದರ ಜೊತೆಗೆ ಸಮಾಜದಲ್ಲಿ ಅಶಾಂತಿ, ವೈಮನಸ್ಸು ಮತ್ತು ಶಾಂತಿ ಭಂಗಕ್ಕೆ ಕಾರಣವಾಗುವ ಅಪಾಯವನ್ನು ಹೊಂದಿದೆ ಎಂದು ಅವರು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಂತಹ ಸಾರ್ವಜನಿಕ ವೇದಿಕೆಗಳನ್ನು ದುರುಪಯೋಗಪಡಿಸಿಕೊಂಡು ಅಪಪ್ರಚಾರ ನಡೆಸುವುದು ಕಾನೂನುಬಾಹಿರವಾಗಿದ್ದು, ಇದು ಸಮಾಜದ ಸಾಮರಸ್ಯ ಹಾಗೂ ಸಹಬಾಳ್ವೆಗೆ ಗಂಭೀರ ಸವಾಲಾಗಿ ಪರಿಣಮಿಸುತ್ತದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದ್ದು, ಕಾನೂನಿನ ಪ್ರಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಸಮಾಜದಲ್ಲಿ ಶಾಂತಿ, ಸಹಿಷ್ಣುತೆ ಮತ್ತು ಧಾರ್ಮಿಕ ಸೌಹಾರ್ದತೆ ನೆಲೆಗೊಳ್ಳುವ ಉದ್ದೇಶದಿಂದ ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ವಿಶೇಷ ಪ್ರಾರ್ಥನೆ ಆಯೋಜಿಸಲಾಗಿದೆ. ಅಪಪ್ರಚಾರಕ್ಕೆ ಕಾರಣರಾದವರು ಅಥವಾ ಇದರಲ್ಲಿ ಭಾಗಿಯಾದವರು ಆತ್ಮಾವಲೋಕನದ ಮನಸ್ಸಿನಿಂದ ಪ್ರಾರ್ಥನೆಯಲ್ಲಿ ಭಾಗವಹಿಸಿ ಶಾಂತಿಯ ಮಾರ್ಗವನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ.
“ಸಮಾಜದ ಶಾಂತಿ ಕಾಪಾಡುವುದು ನಮ್ಮೆಲ್ಲರ ಹೊಣೆಗಾರಿಕೆ. ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಸಂಯಮ, ಸಂಸ್ಕೃತಿ ಮತ್ತು ಕಾನೂನುಬದ್ಧ ಮಾರ್ಗಗಳ ಮೂಲಕ ವ್ಯಕ್ತಪಡಿಸುವುದೇ ನಾಗರಿಕ ಧರ್ಮ” ಎಂದು ಗರೋಡಿ ಕ್ಷೇತ್ರದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ, ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಜಾತ್ರೋತ್ಸವ ಪ್ರಯುಕ್ತ ನಡೆಯುವ ಕೋಳಿ ಅಂಕದ ವಿಚಾರದಲ್ಲಿ ಆಡಳಿತ ಯಂತ್ರವನ್ನು ಯಾವುದೇ ರೀತಿಯಲ್ಲಿ ದುರುಪಯೋಗಪಡಿಸಿಕೊಂಡಿಲ್ಲ ಹಾಗೂ ಕೋಳಿ ಅಂಕವನ್ನು ತಡೆಯುವಂತೆ ಯಾವುದೇ ಒತ್ತಡ ಪ್ರಯೋಗಿಸಲಿಲ್ಲ ಎಂಬುದನ್ನು ಈ ಮೂಲಕ ಸ್ಪಷ್ಟವಾಗಿ ಪ್ರಮಾಣೀಕರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
̲ ಪದ್ಮರಾಜ್ ಪೂಜಾರಿ

