ಸಂಜೀವಿನಿ ಸ್ವಸಹಾಯ ಸಂಘಗಳ ಒಕ್ಕೂಟದ ಅವ್ಯವಹಾರ ಬಯಲಿಗೆಳೆಯಲು ಉನ್ನತ ಮಟ್ಟದ ತನಿಖೆ ನಡೆಸಿ: ಸಂಧ್ಯಾ ರಮೇಶ್

0
6

ಮಹಿಳಾ ಸಬಲೀಕರಣದ ಸದುದ್ದೇಶದಿಂದ ಪ್ರಾರಂಭವಾದ ಸಂಜೀವಿನಿ ಸ್ವಹಾಯ ಸಂಘಗಳ ಒಕ್ಕೂಟದಲ್ಲಿ ಭಾರೀ ಅವ್ಯವಹಾರ ನಡೆದಿರುವ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಬಗ್ಗೆ ತಕ್ಷಣ ಉನ್ನತ ಮಟ್ಟದ ತನಿಖೆ ನಡೆಸಿ ಗ್ರಾಮೀಣ ಭಾಗದ ಮಹಿಳೆಯರಿಗೆ ನ್ಯಾಯ ಒದಗಿಸುವಂತೆ ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್ ಆಗ್ರಹಿಸಿದ್ದಾರೆ.

ಉಡುಪಿ ಜಿಲ್ಲೆಯ 155 ಸ್ವಸಹಾಯ ಸಂಘಗಳ ಒಕ್ಕೂಟಗಳ ಪೈಕಿ 3 ಸ್ವಸಹಾಯ ಸಂಘಗಳ ಒಕ್ಕೂಟಗಳಲ್ಲಿ ಹಣ ದುರುಪಯೋಗದ ಪ್ರಕರಣಗಳು ಕಳೆದ ಎರಡು ದಿನಗಳಲ್ಲಿ ಬೆಳಕಿಗೆ ಬಂದಿರುತ್ತದೆ.

155 ಗ್ರಾಮ ಪಂಚಾಯಿತಿಗಳಲ್ಲಿ ತಲಾ ಒಂದರಂತೆ ಸ್ವಸಹಾಯ ಸಂಘದ ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು ಪ್ರತಿ ಒಕ್ಕೂಟಗಳಲ್ಲಿ 10ರಿಂದ 70ರ ವರೆಗೂ ಸ್ವಸಹಾಯ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಸುಮಾರು 90,000 ಮಹಿಳೆಯರು ಸಂಜೀವಿನಿ ಯೋಜನೆ ಅಡಿ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಇಂತಹ ಸಂದರ್ಭದಲ್ಲಿ 3 ಒಕ್ಕೂಟಗಳಲ್ಲಿ ರೂ.80 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಪ್ರಕರಣ ಸಂಜೀವಿನಿ ಸದಸ್ಯರಿಗೆ ಆಘಾತಕಾರಿ ವಿಷಯವಾಗಿ ಪರಿಣಮಿಸಿದ್ದು, ದಿಕ್ಕು ತೋಚದಂತಾಗಿರುತ್ತದೆ. ಇಂತಹ ಪ್ರಕರಣಗಳು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿರುವ ಸಾಧ್ಯತೆ ಇದೆ. ಸ್ವಸಹಾಯ ಸಂಘದ ಒಕ್ಕೂಟಗಳಲ್ಲಿ ಲೆಕ್ಕಪತ್ರ ನಿರ್ವಹಣೆಗಳಲ್ಲಿ ಹಣಕಾಸು ವಿಚಾರಗಳಲ್ಲಿ ಸಂಘಗಳ ಚಟುವಟಿಕೆಗಳ ಮೇಲುಸ್ತುವಾರಿಯಲ್ಲಿ ಸಮರ್ಪಕ ಮೇಲ್ವಿಚಾರಣೆಯ ಲೋಪ ಎದ್ದು ಕಂಡುಬರುತ್ತದೆ.

ಕೇಂದ್ರ ಸರಕಾರ ಪ್ರಾಯೋಜಿತ ಹಾಗೂ ರಾಜ್ಯ ಸರ್ಕಾರ ಅನುಷ್ಠಾನಗೊಳಿಸುತ್ತಿರುವ ಮಹತ್ವದ ಯೋಜನೆಯಲ್ಲಿ ಉಡುಪಿಯಂತಹ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಅವ್ಯವಹಾರ ನಡೆದಿರುವುದು ಅತ್ಯಂತ ಖಂಡನೀಯ.

ರಾಜ್ಯ ಸರ್ಕಾರ ಮಹಿಳೆಯರ ಸಬಲೀಕರಣದ ಯೋಜನೆಯ ಅವ್ಯವಹಾರದ ಬಗ್ಗೆ ಪ್ರಕರಣಗಳು ದಾಖಲಾಗಿದ್ದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್ ಮುಖಂಡರು ಈ ಬಗ್ಗೆ ಚಕಾರ ಎತ್ತುತ್ತಿಲ್ಲ.

ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆಯ ಅಗತ್ಯವಿದ್ದು ಹಣ ದುರುಪಯೋಗದ ಪ್ರಕರಣಗಳಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಕಾನೂನಿನಡಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ರೀತಿ ನಡೆದಿರುವ ಸಾಧ್ಯತೆ ಇದ್ದು, ತಕ್ಷಣ ರಾಜ್ಯ ಸರ್ಕಾರ ಎಚ್ಚೆತ್ತು ಅಗತ್ಯ ಕ್ರಮ ವಹಿಸಬೇಕಿದೆ ಎಂದು ಸಂಧ್ಯಾ ರಮೇಶ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.