ಕುಲಾಲ ಸಂಘದಿಂದ ಮಾಣಿಲ ಕ್ಷೇತ್ರಕ್ಕೆ ಭಕ್ತಿಪೂರ್ವಕ ಹಸಿರುವಾಣಿ ಹೊರೆ ಕಾಣಿಕೆ

0
7

ಕಾಸರಗೋಡು: ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಆಶ್ರಯದಲ್ಲಿ ಮಾಣಿಲ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಮಂಜೇಶ್ವರ ವಲಯ ಸಮಿತಿಯ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಮಾಣಿಲದಲ್ಲಿ ನಡೆಯಲಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದ ಯಶಸ್ಸಿಗಾಗಿ ಹಸಿರುವಾಣಿ ಹೊರೆ ಕಾಣಿಕೆ ಹಾಗೂ ಧನಸಹಾಯ ಸಮರ್ಪಿಸಲಾಯಿತು.

ಮಂಜೇಶ್ವರ, ಮೀಂಜ, ಮಂಗಲ್ಪಾಡಿ ಹಾಗೂ ವರ್ಕಾಡಿ ಕುಲಾಲ ಪಂಚಾಯತ್ ಶಾಖೆಗಳ ಸಹಕಾರದೊಂದಿಗೆ ಆ.9ರಂದು ಬೆಳಿಗ್ಗೆ 9 ಗಂಟೆಗೆ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಚೇರಿಯಿಂದ ಹಸಿರುವಾಣಿ ಹೊರೆ ಕಾಣಿಕೆ ಹಾಗೂ ಧನಸಹಾಯವನ್ನು ಶ್ರೀ ಕ್ಷೇತ್ರ ಮಾಣಿಲಕ್ಕೆ ಕೊಂಡೊಯ್ಯಲಾಯಿತು.

ದಾರಿಮಧ್ಯೆ ದೈಗೋಳಿ ಶ್ರೀ ರಾಮಕೃಷ್ಣ ಭಜನಾ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ, ಸಾಮಗ್ರಿಗಳನ್ನು ಶ್ರೀ ಧಾಮ ಮಾಣಿಲದ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರಕ್ಕೆ ಸಮರ್ಪಿಸಲಾಯಿತು. ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮಕ್ಕೆ ಈ ಮೂಲಕ ಸಂಘದ ವತಿಯಿಂದ ಸಹಕಾರ ನೀಡಲಾಯಿತು.

ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಕುಲಾಲ ಸಂಘದ ಪ್ರಧಾನ ಕಾರ್ಯದರ್ಶಿ ದಾಮೋದರ ಮಾಸ್ಟರ್ ಕಬ್ಬಿನಹಿತ್ಲು, ಪದಾಧಿಕಾರಿಗಳಾದ ಸುಧೀರ್ ರಂಜನ್ ದೈಗೋಳಿ, ತಾರಾನಾಥ ಕಣ್ವತೀರ್ಥ, ಉದಯ ಕುಮಾರ್ ಸಿ. ಕಣ್ವತೀರ್ಥ, ಸುರೇಶ್ ಕಣ್ವತೀರ್ಥ ಹಾಗೂ ಕೃಷ್ಣಪ್ಪ ಉಜಿರ ಉಪಸ್ಥಿತರಿದ್ದರು.

ಸಾಮೂಹಿಕ ಪೂಜಾ ಕಾರ್ಯಕ್ರಮದ ಯಶಸ್ಸಿಗಾಗಿ ಭಕ್ತಿಪೂರ್ವಕವಾಗಿ ಧನಸಹಾಯ ಹಾಗೂ ಹಸಿರುವಾಣಿ ಹೊರೆ ಕಾಣಿಕೆ ಸಾಮಗ್ರಿಗಳನ್ನು ನೀಡಿದ ಎಲ್ಲ ಭಕ್ತರು, ಸಂಘದ ಸದಸ್ಯರು ಹಾಗೂ ಸಹಕರಿಸಿದವರಿಗೂ ಸಮಿತಿಯ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು. ಶ್ರೀ ದುರ್ಗಾಮಹಾಲಕ್ಷ್ಮೀ ದೇವರು ಸರ್ವರಿಗೂ ಅನುಗ್ರಹಿಸಲಿ ಎಂದು ಪ್ರಾರ್ಥಿಸಲಾಯಿತು.