ಹಸ್ತಪ್ರತಿಗಳ ಸಮೀಕ್ಷಾ ಕಾರ್ಯ ಪರಿಣಾಮಕಾರಿಯಾಗಿ ನಿರ್ವಹಿಸಿ : ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

0
37

ಉಡುಪಿ : ಜ್ಞಾನ ಭಾರತಂ ಮಿಷನ್ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಭಾರತದ ಜ್ಞಾನ ಸಂಪತ್ತನ್ನು ಮುಂದಿನ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ರಾಷ್ಟ್ರಾದ್ಯಂತ ಇರುವ ಹಸ್ತಪ್ರತಿಗಳನ್ನು ಸಂರಕ್ಷಿಸುವ ಉದ್ದೇಶದೊಂದಿಗೆ ಹಸ್ತಪ್ರತಿಗಳ ಸಮೀಕ್ಷೆ ಕಾರ್ಯ ಜಿಲ್ಲೆಯಲ್ಲಿ ಈಗಾಗಲೇ ಪ್ರಾರಂಭವಾಗಿದೆ. ಸಮೀಕ್ಷೆ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಎನ್.ಐ. ಸಿ ಹಾಲ್ ನಲ್ಲಿ, ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಹಸ್ತ ಪ್ರತಿಗಳ ಸಂರಕ್ಷಣೆ ಮತ್ತು ಡಿಜಿಟಲೀಕರಣ ಕಾರ್ಯ ಯೋಜನೆಯನ್ನು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಚರ್ಚಿಸಲು ಆಯೋಜಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು
ಜ್ಞಾನ ಭಾರತಂ ಯೋಜನೆಯಡಿಯಲ್ಲಿ ದೇಶಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪಠ್ಯಗಳು, ಹಸ್ತಪ್ರತಿಗಳು, ದಾಖಲೆಗಳ ಸಮೀಕ್ಷೆಯನ್ನು ಕೈಗೊಂಡು ಇವುಗಳನ್ನು ಇಂದಿನ ತಂತ್ರಜ್ಞಾನದ ಮೂಲಕ ಶಾಶ್ವತವಾಗಿ ಉಳಿಸಲಾಗುತ್ತದೆ. ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ, ಡಿಜಟಲೀಕರಣ, ನೊಂದಣಿ, ವಿಮರ್ಶಾತ್ಮಾಕ ಸಂಪಾದನೆ, ಅನುವಾದ ಮತ್ತು ಪ್ರಕಟಣೆಯನ್ನು ಮಾಡುವ ಮೂಲಕ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಒಂದೇ ವೇದಿಕೆ ಮೂಲಕ ಜನರ ವೀಕ್ಷಣೆಗೆ ಲಭ್ಯವಾಗುವಂತೆ ಮಾಡಲಾಗುವುದು ಎಂದರು.

ತಾಳೆಗರಿ, ಹಳೆಯ ಹಸ್ತಪ್ರತಿಗಳು, ಇತರೆ ರೂಪಗಳಲ್ಲಿ ಬರೆಯಲ್ಪಟ್ಟ ಪ್ರಾಚೀನ ವಿಜ್ಞಾನ, ಸಾಹಿತ್ಯ, ವೈದ್ಯಕೀಯ ಹಾಗೂ ಧಾರ್ಮಿಕ ಜ್ಞಾನ ಸಂಗ್ರಹಗೊಂಡಿದೆ. ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಹಸ್ತಪ್ರತಿಗಳು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಜ್ಞಾನ ಸಂಪತ್ತಿನ ಅಮೂಲ್ಯ ಭಾಗವಾಗಿದೆ. ಭವಿಷ್ಯದ ಪೀಳಿಗೆಗೆ ಅವುಗಳ ಜ್ಞಾನ ಸಂಪತ್ತಿನ ಸಂರಕ್ಷಣೆ ಮತ್ತು ಬಳಕೆ ಮಾಡುವುದು ರಾಷ್ಟ್ರೀಯ ಹಸ್ತಪ್ರತಿ ಸಮೀಕ್ಷೆಯ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.

ಹಸ್ತಪ್ರತಿಗಳ ಸಮೀಕ್ಷೆಯನ್ನು ವ್ಯವಸ್ಥಿತ ಹಾಗೂ ಸಮಯೋಚಿತವಾಗಿ ಕೈಗೊಳ್ಳಬೇಕಿದೆ. ಮಠ ಮಾನ್ಯಗಳು, ಪುರೋಹಿತರ ಮನೆಗಳು, ಸಾಂಸ್ಥಿಕ ಭಂಡಾರಗಳು, ದೇವಾಲಯಗಳು, ಗ್ರಂಥಾಲಯಗಳು, ಆಶ್ರಮಗಳು, ಖಾಸಗಿ ವ್ಯಕ್ತಿಗಳು ಸಂಗ್ರಹದಲ್ಲಿನ ಹಸ್ತಪ್ರತಿಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ಕಾಯ್ದುಕೊಳ್ಳಬೇಕು ಎಂದರು.

ಹಸ್ತಪ್ರತಿಗಳ ಸಮೀಕ್ಷೆ ಬಗ್ಗೆ ಯಾರಿಗೂ ಆತಂಕ ಅಥವಾ ಹಿಂಜರಿಕೆ ಬೇಡ. ಹಸ್ತಪ್ರತಿಗಳ ಮಾಹಿತಿಯನ್ನು ಸಂಗ್ರಹಿಸಿ ಡಿಜಿಟಲ್ ರೂಪದಲ್ಲಿ ಉಳಿಸಿ ಭವಿಷ್ಯದ ಪೀಳಿಗೆಗೆ ಜ್ಞಾನ ಸಂಪತ್ತಾಗಿ ಉಳಿಸಿ ಸಂರಕ್ಷಿಸುವುದು ಮಾತ್ರ ಹಸ್ತಪ್ರತಿ ಸಮೀಕ್ಷೆಯ ಉದ್ದೇಶವಾಗಿದೆ. ಈ ಸಮೀಕ್ಷೆಗೆ ಸಕ್ರಿಯ ಸಹಕಾರ ನೀಡಿ ಯಶಸ್ಸುಗೊಳಿಸುವಂತೆ ತಿಳಿಸಿದರು.

ಈಗಾಗಲೇ ಜಿಲ್ಲೆಯಲ್ಲಿ ಹಸ್ತ ಪ್ರತಿಗಳ ಗಣತಿ ಕಾರ್ಯ ಪ್ರಾರಂಭವಾಗಿದ್ದು, 40 ಕೇಂದ್ರಗಳಲ್ಲಿ 6೦೦೦ ಕ್ಕೂ ಹೆಚ್ಚು ಹಸ್ತ ಪ್ರತಿಗಳನ್ನು ಆಪ್ ನಲ್ಲಿ ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಪ್ರಚಾರ ನೀಡಿ, ಜನಸಾಮಾನ್ಯರು ಸ್ವಯಂ ಪ್ರೇರಿತವಾಗಿ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳುವುದರ ಮೂಲಕ ಇದನ್ನು ಯಶಸ್ವಿಗೊಳಿಸಲು ಮುಂದಾಗಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪೌರಯುಕ್ತ ಮಹಾಂತೇಶ್ ಹಂಗರಗಿ, ವಾರ್ತಾಧಿಕಾರಿ ಮಂಜುನಾಥ್ ಬಿ, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ಜ್ಞಾನ ಭಾರತಂ ಉಡುಪಿಯ ಜಿಲ್ಲಾ ಮಟ್ಟದ ಸಂಯೋಜಕ ಡಾ. ಗೋಪಾಲಚಾರ್, ಪುರಾತತ್ವ ಶಾಸ್ತçಜ್ಞ ಪ್ರೊ.ಟಿ. ಮುರುಗೇಶಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here