
ಮಂಗಳೂರು : ಮೇ 24ರಂದು ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ನಡೆಯಲಿರುವ “ಅಪ್ಪೆ ಬೇರ್ ದ ತುಳುನಾಡ್ – ರಾಷ್ಟ್ರೀಯ ತುಳು ವಿಚಾರಗೋಷ್ಠಿ” ಕಾರ್ಯಕ್ರಮದ ಅಂಗವಾಗಿ ವಿವಿಧ ಭಾಗಗಳಿಂದ ಪ್ರಬಂಧಗಳನ್ನು ಆಹ್ವಾನಿಸಲಾಗಿದ್ದು, ಸ್ವೀಕಾರಗೊಂಡ ಪ್ರಬಂಧಗಳನ್ನು ಕಳುಹಿಸಿದ ಪ್ರಬಂಧಕಾರರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಿ ಗೌರವಿಸಲು ಆಯೋಜಕರು ತೀರ್ಮಾನಿಸಿದ್ದಾರೆ.
ತುಳುನಾಡಿನ ಮಾತೃಮೂಲ ಸಂಸ್ಕೃತಿ, ತುಳು ಭಾಷೆ, ಪರಂಪರೆ ಹಾಗೂ ಸಾಮಾಜಿಕ ವಿಚಾರಗಳನ್ನು ಆಧರಿಸಿ ದೇಶ-ವಿದೇಶಗಳಿಂದ ಬಂದ ಪ್ರಬಂಧಗಳಲ್ಲಿ ಕೆಲವು ಪ್ರಬಂಧಗಳನ್ನು ವಿಚಾರಗೋಷ್ಠಿಗೆ ಆಯ್ಕೆ ಮಾಡಲಾಗಿದೆ. ಆಯ್ಕೆಯಾದ ಪ್ರಬಂಧಕಾರರಿಗೆ ಕಾರ್ಯಕ್ರಮದಲ್ಲಿ ಅಭಿನಂದನಾ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಬಂಧ ಸ್ವೀಕಾರಗೊಂಡವರಲ್ಲಿ ಶರತ್ ಶೆಟ್ಟಿ ಪಡುಪಳ್ಳಿ ನೈಜೀರಿಯಾ, ಶರೋನ್ ಶೆಟ್ಟಿ ಐಕಳ, ರೇಮಂಡ್ ಡಿಕೂನಾ ತಾಕೊಡೆ, ವಿನೋದ ಜಯಪ್ರಸಾದ್ ಕಾರಿಂಜ, ಕಾಸರಗೋಡು, ಕುಸುಮ್ ಸಾಲಿಯಾನ್ ಪುಣೆ, ಶಂಕರ್ ಪಡಂಗ ಕಿಲ್ಪಾಡಿ ಹಾಗೂ ಪಡುಕುಡೂರ್ ಪ್ರಫುಲ್ಲ ದಿನೇಶ್ ಶೆಟ್ಟಿ ಮುಂಬೈ ಸೇರಿದ್ದಾರೆ.
ದೇಶ-ವಿದೇಶಗಳಿಂದ ಬಂದಿರುವ ಈ ಬೌದ್ಧಿಕ ಸ್ಪಂದನೆ ತುಳುನಾಡಿನ ಮಾತೃಮೂಲ ಸಂಸ್ಕೃತಿ, ತುಳು ಭಾಷೆ ಹಾಗೂ ಪರಂಪರೆಯ ಬಗ್ಗೆ ಹೆಚ್ಚುತ್ತಿರುವ ಆಸಕ್ತಿ ಮತ್ತು ಕಾಳಜಿಯನ್ನು ಪ್ರತಿಬಿಂಬಿಸುತ್ತಿದ್ದು, ರಾಷ್ಟ್ರೀಯ ತುಳು ವಿಚಾರಗೋಷ್ಠಿಗೆ ವಿಶೇಷ ಚೈತನ್ಯ ನೀಡಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಬಂಧಕಾರರನ್ನು ಗೌರವಿಸುವ ಮೂಲಕ ಅವರ ಚಿಂತನೆ ಮತ್ತು ಬೌದ್ಧಿಕ ಕೊಡುಗೆಯನ್ನು ಸನ್ಮಾನಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
