Thursday, April 24, 2025
HomeUncategorizedಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ...

ಗ್ಯಾರಂಟಿ ನೆಪದಲ್ಲಿ ಬೆಲೆ ಏರಿಕೆಯ ಬರೆ ಎಳೆದ ಕಾಂಗ್ರೆಸ್ ಗೆ ಕಾಮಗಾರಿಯ ಮುಕ್ತಾಯ ಹಂತದಲ್ಲಿ ಪ್ರಹಸನ ನಡೆಸುವ ಯಾವುದೇ ನೈತಿಕತೆ ಇಲ್ಲ : ಕಿಶೋರ್ ಕುಮಾರ್ ಕುಂದಾಪುರ

ಗ್ಯಾರಂಟಿಗಳ ಆಸೆ ತೋರಿಸಿ ಅಗತ್ಯ ವಸ್ತುಗಳ ಬೆಲೆಯನ್ನು ಯದ್ವಾತದ್ವಾ ಏರಿಸಿ ಜನಸಾಮಾನ್ಯರ ಜೀವನದಲ್ಲಿ ಚೆಲ್ಲಾಟವಾಡುತ್ತಿರುವ ಕಾಂಗ್ರೆಸ್ ಗೆ ಅಂತಿಮ ಹಂತ ತಲುಪಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನಿರ್ಮಾಣ ಕಾಮಗಾರಿಯನ್ನು ಅಣಕಿಸಿ ಏಪ್ರಿಲ್ ಫೂಲ್ ದಿನವನ್ನು ಆಚರಿಸುವ ಯಾವುದೇ ನೈತಿಕತೆ ಇಲ್ಲ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ತಿಳಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕ್ರಿಯಾಶೀಲ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಸಹಿತ ಉಡುಪಿ ಜಿಲ್ಲೆಯಾದ್ಯoತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ತೊಡಕು ನಿವಾರಣೆಗೆ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಕೆಲವು ಕಾಮಗಾರಿಗಳ ವಿಳಂಬದ ನೈಜ ಕಾರಣ ಹಾಗೂ ಪ್ರಸಕ್ತ ಪ್ರಗತಿಯ ಕುರಿತು ಅಗತ್ಯ ಮಾಹಿತಿಯನ್ನು ಪ್ರಚುರಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಸಂಸದರೊಂದಿಗೆ ಕೈಜೋಡಿಸಿದ್ದರೂ, ತಮ್ಮದೇ ಪಕ್ಷದ ಜಿಲ್ಲಾ ಉಸ್ತುವಾರಿ ಸಚಿವೆ ಈ ಕುರಿತು ಏನು ಜವಾಬ್ದಾರಿ ನಿರ್ವಹಿಸಿದ್ದಾರೆ ಎಂಬುದನ್ನು ಪ್ರಶ್ನಿಸದೆ ಜಿಲ್ಲೆಯಾದ್ಯoತ ದಾಖಲೆಯ ಅಭಿವೃದ್ಧಿ ಕಾಮಗಾರಿಗಳನ್ನು ಸಹಿಸದ ಕಾಂಗ್ರೆಸಿಗರು ಇಂದ್ರಾಳಿ ರೈಲ್ವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿಯ ಅಂತಿಮ ಹಂತದಲ್ಲಿ ಎಪ್ರಿಲ್ ಫೂಲ್ ಎಂಬ ಪ್ರತಿಭಟನೆಯ ಪ್ರಹಸನದಲ್ಲಿ ತಮ್ಮ ಮೂರ್ಖತನವನ್ನು ಜಗಜ್ಜಾಹೀರುಪಡಿಸಿರುವುದು ಹಾಸ್ಯಾಸ್ಪದವಾಗಿದೆ.

ಪ್ರತಿಭಟನೆಯ ಹೆಸರಿನಲ್ಲಿ ಪ್ರಧಾನಿ ಸಹಿತ ಸಂಸದರ, ಮಾಜಿ ಸಂಸದರ ಮುಖವಾಡವನ್ನು ಧರಿಸಿ ಅಣಕಿಸಿರುವುದು ಹಾಗೂ ರೈಲ್ವೆ ಬ್ರಿಡ್ಜ್ ಕಾಮಗಾರಿ ನಡೆಯುತ್ತಿರುವ ಸ್ಥಳದಲ್ಲಿ ಅನಾಗರಿಕ ಬರಹಗಳನ್ನು ಬರೆದಿರುವುದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನವನ್ನು ಸಾಬೀತುಪಡಿಸಿದೆ.

ರಾಜ್ಯ ಕಾಂಗ್ರೆಸ್ ಸರಕಾರದ ದುರಾಡಳಿತ, ಭ್ರಷ್ಟಾಚಾರ, ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನವನ್ನು ರೂಪಿಸಿದೆ. ವಿಪರೀತ ಬೆಲೆ ಏರಿಕೆ, ರಾಜ್ಯ ಬಜೆಟ್ ನಲ್ಲಿ ಉಡುಪಿ ಜಿಲ್ಲೆಯನ್ನು ಕಡೆಗಣಿಸಿರುವುದು, ಸಾರ್ವಜನಿಕ ಗುತ್ತಿಗೆಯಲ್ಲಿ ಸಂವಿಧಾನ ಬಾಹಿರವಾಗಿ ಮುಸ್ಲಿಮರಿಗೆ 4% ಮೀಸಲಾತಿಯನ್ನು ನೀಡಿರುವುದು, ದಲಿತರ ಕಲ್ಯಾಣಕ್ಕೆ ಮೀಸಲಿಟ್ಟ ಹಣದ ದುರುಪಯೋಗ, ಸ್ಮಾರ್ಟ್ ಮೀಟರ್ ದಂಧೆ ಸಹಿತ ರಾಜ್ಯ ಸರಕಾರದ ಹಲವಾರು ಹಗರಣಗಳ ವಿರುದ್ಧ ಕಾಂಗ್ರೆಸಿಗರು ಸ್ವಯಂ ಪ್ರತಿಭಟನೆಯನ್ನು ನಡೆಸಿ ತಮ್ಮ ನೈತಿಕತೆಯನ್ನು ಉಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗುವುದು ಉತ್ತಮ.

ಕೇವಲ ಅಧಿಕಾರದ ಲಾಲಸೆಯಿಂದ ಗ್ಯಾರಂಟಿಗಳ ಮಂಕು ಬೂದಿ ಎರಚಿ ಜನರನ್ನು ಫೂಲ್ ಮಾಡಿರುವ ಕಾಂಗ್ರೆಸ್ ಸರಕಾರ ದಿನನಿತ್ಯ ಬೆಲೆ ಏರಿಕೆಯ ಶಾಕ್ ನೀಡುತ್ತಾ ವಿವಿಧ ರೀತಿಯ ಸುಲಿಗೆಯಲ್ಲಿ ತೊಡಗಿರುವುದನ್ನು ರಾಜ್ಯದ ಜನತೆ ಗಮನಿಸುತ್ತಿದ್ದು, ಜನ ವಿರೋಧಿ ಭ್ರಷ್ಟ ಕಾಂಗ್ರೆಸಿಗೆ ಸೂಕ್ತ ಸಮಯದಲ್ಲಿ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಕಿಶೋರ್ ಕುಮಾರ್ ಕುಂದಾಪುರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular