ಬೆಂಗಳೂರು : ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಸಿ. ಮಹದೇವಪ್ಪ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬಂದಿದ್ದು, ಈ ಸಂಬಂಧ ಬೆಂಗಳೂರು ನಿವಾಸಿಯೊಬ್ಬರು ರಾಜ್ಯಪಾಲರಿಗೆ ಅಧಿಕೃತ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ, ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಸಾಮಾಜಿಕ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮ/ಮಂಡಳಿಯ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ, ಭ್ರಷ್ಟಾಚಾರ, ದಾಖಲೆಗಳ ನಕಲಿ ಸೃಷ್ಟಿ ಹಾಗೂ ಅಧಿಕಾರ ದುರುಪಯೋಗ ನಡೆದಿದೆ ಎಂದು ಆರೋಪಿಸಲಾಗಿದೆ.
ಮನವಿಯ ಪ್ರಕಾರ, KREIS ಅಡಿಯಲ್ಲಿ ನಡೆದ ಹಲವು ಟೆಂಡರ್‌ಗಳನ್ನು ಪಾರದರ್ಶಕ ಹಾಗೂ ಸ್ಪರ್ಧಾತ್ಮಕ ಪ್ರಕ್ರಿಯೆ ಅನುಸರಿಸದೇ, ಕೆಲ ನಿರ್ದಿಷ್ಟ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮಂಜೂರು ಮಾಡಲಾಗಿದೆ ಎನ್ನಲಾಗಿದೆ. ಟೆಂಡರ್ ಅರ್ಹತೆ ಪಡೆಯಲು ನಕಲಿ ಅನುಭವ ಪ್ರಮಾಣಪತ್ರಗಳು, ತಿರುಚಿದ ಯೋಜನಾ ದಾಖಲೆಗಳು ಹಾಗೂ ಇತರೆ ತಪ್ಪು ಮಾಹಿತಿಗಳನ್ನು ಸಲ್ಲಿಸಲಾಗಿದೆ ಎಂಬ ಆರೋಪವೂ ದೂರಿನಲ್ಲಿ ಉಲ್ಲೇಖವಾಗಿದೆ.
ಇದಲ್ಲದೆ, ಸರ್ಕಾರಿ ಅಧಿಕಾರಿಗಳ ಪಾತ್ರ, GeM ಪೋರ್ಟಲ್ ನಿಯಮಗಳ ಪಾಲನೆ, ಟೆಂಡರ್ ಅರ್ಹತಾ ದಾಖಲೆಗಳ ಸತ್ಯಾಸತ್ಯತೆ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯನ್ನು ಸ್ವತಂತ್ರ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ರಾಜ್ಯಪಾಲರಿಗೆ ಮನವಿ ಮಾಡಲಾಗಿದೆ.
ಆರೋಪಗಳು ಸಾಬೀತಾದಲ್ಲಿ ಸಾರ್ವಜನಿಕ ಹಣಕ್ಕೆ ಉಂಟಾದ ನಷ್ಟವನ್ನು ಸಂಬಂಧಪಟ್ಟವರಿಂದ ವಸೂಲಿ ಮಾಡಬೇಕು. ಜೊತೆಗೆ, ಹೆಚ್.ಸಿ. ಮಹದೇವಪ್ಪ ಅವರನ್ನು ವಿಧಾನಸಭಾ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೂಡ ಮನವಿಯಲ್ಲಿ ಆಗ್ರಹಿಸಲಾಗಿದೆ.
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಹೆಚ್.ಸಿ. ಮಹದೇವಪ್ಪ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ಬಹಿರಂಗವಾಗಬೇಕಿದೆ.

