‘ನಾನು ಬದುಕಿದ್ದೇನೆ, ಸತ್ತಿಲ್ಲ’ : ಸುಳ್ಳು ನಿಧನ ಸುದ್ದಿ ಹಬ್ಬಿಸಿದವರ ವಿರುದ್ಧ ಸೈಬರ್ ಠಾಣೆಗೆ ನಟ ದೊಡ್ಡಣ್ಣ ದೂರು..!

0
109

ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ತಮ್ಮ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿ ವಿಕೃತ ಸಂತೋಷ ಪಡುತ್ತಿರುವವರ ವಿರುದ್ಧ ಬೆಂಗಳೂರು ಉತ್ತರ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ಸ್ವತಃ ತೆರಳಿ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣದ ‘ಪಬ್ಲಿಕ್ ಫ್ರೆಂಡ್’ ಎಂಬ ಖಾತೆಯಲ್ಲಿ ದೊಡ್ಡಣ್ಣ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿರುವ ಪೋಸ್ಟ್ ವೈರಲ್ ಆಗಿತ್ತು. ಈ ಪೋಸ್ಟ್ ಕಂಡ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಹಾಗೂ ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಬಳಿಕ ಸ್ವತಃ ದೊಡ್ಡಣ್ಣ ಅವರು ಮಾಧ್ಯಮಗಳ ಮುಂದೆ ಬಂದು, “ನಾನು ಆರೋಗ್ಯವಾಗಿದ್ದೇನೆ, ಸುಳ್ಳು ಸುದ್ದಿಗಳನ್ನು ನಂಬಬೇಡಿ” ಎಂದು ಸ್ಪಷ್ಟನೆ ನೀಡಿದ್ದರು.

ಕಳೆದ ಹಲವು ವರ್ಷಗಳಿಂದ ದೊಡ್ಡಣ್ಣ ಅವರ ನಿಧನದ ಬಗ್ಗೆ ಸುಳ್ಳು ಸುದ್ದಿಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ ಈ ಬಾರಿ ಮಾತ್ರ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

“ನಾನು ಬದುಕಿರುವಾಗಲೇ ಸತ್ತಿದ್ದೇನೆ ಎಂದು ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗಿದೆ. ಎಐ ತಂತ್ರಜ್ಞಾನ ಬಳಸಿ ವಿಡಿಯೋ ಹಾಗೂ ಚಿತ್ರಗಳನ್ನು ತಿರುಚಿ ವೈರಲ್ ಮಾಡಿರುವುದರಿಂದ ನನಗೆ ಮಾನಸಿಕ ನೋವು ಮತ್ತು ಆಘಾತ ಉಂಟಾಗಿದೆ. ನನ್ನ ಕುಟುಂಬ ಹಾಗೂ ಅಭಿಮಾನಿಗಳ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ದೊಡ್ಡಣ್ಣ ಆಗ್ರಹಿಸಿದ್ದಾರೆ.

ಜೂನ್ 15ರಂದು ಸಲ್ಲಿಸಲಾದ ದೂರಿನ ಆಧಾರದಲ್ಲಿ ಉತ್ತರ ವಿಭಾಗದ ಸೈಬರ್ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ‘ಪಬ್ಲಿಕ್ ಫ್ರೆಂಡ್’ ಖಾತೆಯ ಐಪಿ ವಿಳಾಸ ಸೇರಿದಂತೆ ಅದರ ಹಿಂದಿರುವ ವ್ಯಕ್ತಿಗಳ ಪತ್ತೆಗೆ ತನಿಖೆ ಚುರುಕುಗೊಂಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಲೈಕ್ಸ್, ವೀವ್ಸ್ ಮತ್ತು ಫಾಲೋವರ್ಸ್‌ಗಾಗಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿದ್ದು, ಇಂತಹ ಕೃತ್ಯಗಳಲ್ಲಿ ತೊಡಗಿದವರಿಗೆ ಕಾನೂನಿನ ಬಿಸಿ ಮುಟ್ಟುವ ಸಾಧ್ಯತೆ ಹೆಚ್ಚಿದೆ.

LEAVE A REPLY

Please enter your comment!
Please enter your name here