Indian Institute of Technology Roorkee ಸಂಶೋಧಕರು ನಡೆಸಿದ ಹೊಸ ಅಧ್ಯಯನವು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಗೋಮೂತ್ರದ ಅರ್ಕದಲ್ಲಿ ಚಿಕುನ್‌ಗುನ್ಯ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವಿದೆ ಎಂದು ಸಂಶೋಧನೆ ತಿಳಿಸಿದ್ದು, ಇದಕ್ಕೆ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಧ್ಯಯನದ ಪ್ರಕಾರ, ಗೋಮೂತ್ರದ ಅರ್ಕವನ್ನು ಬಳಸಿದಾಗ ಚಿಕುನ್‌ಗುನ್ಯ ವೈರಾಣುವಿನ ತೀವ್ರತೆ ಶೇ.90ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಕಡಿಮೆಯಾಗಿದೆ. ಅಲ್ಲದೆ, ನೈಸರ್ಗಿಕ ಪದಾರ್ಥಗಳನ್ನು ಬಳಸಿ ತಯಾರಿಸಲಾದ ವಿಶೇಷ ಸೂತ್ರೀಕರಣದ ಮೂಲಕ ವೈರಾಣುವಿನ ತೀವ್ರತೆ ಶೇ.99.85ರಷ್ಟು ಇಳಿಕೆಯಾಗಿರುವುದಾಗಿ ವರದಿಯಾಗಿದೆ.
ಈ ಸಂಶೋಧನೆಯನ್ನು ಪ್ರೊ. ಶೈಲಿ ತೋಮರ್ ನೇತೃತ್ವದ ತಂಡ ನಡೆಸಿದ್ದು, ಅಧ್ಯಯನದ ಫಲಿತಾಂಶಗಳು ACS Agricultural Science & Technology ಜರ್ನಲ್‌ನಲ್ಲಿ ಪ್ರಕಟವಾಗಿವೆ.
ಚಿಕುನ್‌ಗುನ್ಯ ಸೊಳ್ಳೆಗಳ ಮೂಲಕ ಹರಡುವ ವೈರಲ್ ಸೋಂಕಾಗಿದ್ದು, ತೀವ್ರ ಜ್ವರ, ಕೀಲುನೋವು ಹಾಗೂ ದೀರ್ಘಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ಸಂಶೋಧನೆಯು ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಡಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ವಿಜ್ಞಾನಿಗಳು ಇದು ಕೇವಲ ಪ್ರಯೋಗಾಲಯ ಮಟ್ಟದಲ್ಲಿ ನಡೆದ ಆರಂಭಿಕ ಅಧ್ಯಯನವಾಗಿದ್ದು, ಮನುಷ್ಯರ ಮೇಲೆ ವೈದ್ಯಕೀಯ ಪರೀಕ್ಷೆಗಳು ಪೂರ್ಣಗೊಂಡ ಬಳಿಕವೇ ಔಷಧೀಯ ಬಳಕೆಯ ಕುರಿತು ನಿರ್ಧಾರ ಕೈಗೊಳ್ಳಬಹುದಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಶೋಧನೆ ಪ್ರಕಟವಾದ ಬಳಿಕ ಕೆಲವರು ಭಾರತೀಯ ಸಾಂಪ್ರದಾಯಿಕ ಜ್ಞಾನಕ್ಕೆ ವೈಜ್ಞಾನಿಕ ಬೆಂಬಲ ದೊರೆತಿದೆ ಎಂದು ಸ್ವಾಗತಿಸಿದರೆ, ಮತ್ತೊಂದು ವಲಯ ಇಂತಹ ಅಧ್ಯಯನಗಳ ಅಗತ್ಯತೆ ಹಾಗೂ ಆದ್ಯತೆ ಕುರಿತು ಪ್ರಶ್ನೆ ಎತ್ತಿದೆ. ಹೀಗಾಗಿ ಈ ಸಂಶೋಧನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.

