AI ಬಳಸಿ ಅಶ್ಲೀಲ ವಿಡಿಯೋ ಸೃಷ್ಟಿ ; ಆರೋಪಿಗಳು ಅಂದರ್..!

0
6

ಚಿಕ್ಕಮಗಳೂರು : ಸಾಮಾಜಿಕ ಜಾಲತಾಣದಲ್ಲಿದ್ದ ಯುವತಿಯ ಫೋಟೋವನ್ನು ದುರ್ಬಳಕೆ ಮಾಡಿಕೊಂಡು ಕೃತಕ ಬುದ್ಧಿಮತ್ತೆ (AI) ಹಾಗೂ ವಿಡಿಯೋ ಎಡಿಟಿಂಗ್ ತಂತ್ರಜ್ಞಾನ ಬಳಸಿ ಅಶ್ಲೀಲ ವಿಡಿಯೋ ಸೃಷ್ಟಿಸಿ ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬಾವಿಕೆರೆ ಗ್ರಾಮದ 25 ವರ್ಷದ ಯುವತಿಯ ಫೋಟೋವನ್ನು ಫೇಸ್‌ಬುಕ್‌ನಿಂದ ಪಡೆದುಕೊಂಡ ಆರೋಪಿಗಳಾದ ಸಾಹುಲ್ ಮತ್ತು ಅಕ್ಷಯ್, ಅದನ್ನು ಬಳಸಿ ನಕಲಿ ಅಶ್ಲೀಲ ವಿಡಿಯೋ ಸೃಷ್ಟಿಸಿದ್ದರು. ಬಳಿಕ ಯುವತಿಯ ತಾಯಿಗೆ ಆ ವಿಡಿಯೋವನ್ನು ಕಳುಹಿಸಿ, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಒತ್ತಡ ಹೇರಿದ್ದರು.

‘ಯೋಗೇಶ್’ ಹೆಸರಿನಲ್ಲಿ ಕಳ್ಳಾಟ

ಆರೋಪಿಗಳು ಬೆಂಗಳೂರು ಮೂಲದ “ಯೋಗೇಶ್” ಎಂಬ ಹೆಸರಿನಲ್ಲಿ ಕರೆ ಮಾಡಿ ಪದೇ ಪದೇ ಹಣಕ್ಕೆ ಬೇಡಿಕೆ ಇಟ್ಟಿದ್ದರು. ನಿರಂತರ ಕಿರುಕುಳದಿಂದ ಬೇಸತ್ತ ಕುಟುಂಬಸ್ಥರು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರಂಭದಲ್ಲಿ ಯೋಗೇಶ್ ಎಂಬ ವ್ಯಕ್ತಿಯ ಮೇಲೆ ಅನುಮಾನ ವ್ಯಕ್ತವಾಗಿದ್ದರೂ, ಪೊಲೀಸ್ ತನಿಖೆಯಲ್ಲಿ ನಿಜವಾದ ಆರೋಪಿಗಳು ಅದೇ ಗ್ರಾಮದ ಸಾಹುಲ್ ಹಾಗೂ ಅಕ್ಷಯ್ ಎಂಬುದು ಬಹಿರಂಗವಾಗಿದೆ.

ಸಾಲ ತೀರಿಸಲು ಅಪರಾಧದ ಹಾದಿ

ಪೊಲೀಸರ ತನಿಖೆ ವೇಳೆ ಆರೋಪಿಗಳು ತಾವು ಹೆಚ್ಚಿನ ಸಾಲದ ಹೊರೆ ಹೊಂದಿದ್ದ ಕಾರಣ ಹಣ ಸಂಪಾದಿಸುವ ಉದ್ದೇಶದಿಂದ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ. ಯುವತಿಯ ಮಾನಹಾನಿ ಮಾಡುವ ಉದ್ದೇಶದಿಂದ AI ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಹಣ ವಸೂಲಿ ಮಾಡಲು ಯತ್ನಿಸಿದ್ದ ಆರೋಪಿಗಳು ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ತಂತ್ರಜ್ಞಾನ ದುರ್ಬಳಕೆಗೆ ತಕ್ಕ ಪಾಠ

ಜನರಿಗೆ ಸಹಾಯವಾಗಬೇಕಿದ್ದ ಆಧುನಿಕ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಅಪರಾಧ ಎಸಗಿದ ಆರೋಪಿಗಳು ಇದೀಗ ಜೈಲು ಸೇರಿದ್ದಾರೆ. ಈ ಘಟನೆ AI ತಂತ್ರಜ್ಞಾನದ ದುರ್ಬಳಕೆಯ ಅಪಾಯಗಳ ಕುರಿತು ಮತ್ತೊಮ್ಮೆ ಎಚ್ಚರಿಕೆ ನೀಡಿದಂತಾಗಿದೆ.

LEAVE A REPLY

Please enter your comment!
Please enter your name here