ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ; ಪೆಟ್ರೋಲ್, ಡೀಸಲ್ ದರ ಕಡಿಮೆಯಾಗುತ್ತಾ ಎಂಬ ನಿರೀಕ್ಷೆಯಲ್ಲಿ ಜನತೆ..!

0
61

ನವದೆಹಲಿ : ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ನಿರಂತರವಾಗಿ ಇಳಿಕೆಯಾಗುತ್ತಿದ್ದು, ಇದರ ಪರಿಣಾಮವಾಗಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸಲ್ ದರ ಕಡಿಮೆಯಾಗಬಹುದೇ ಎಂಬ ನಿರೀಕ್ಷೆ ಸಾರ್ವಜನಿಕರಲ್ಲಿ ಮೂಡಿದೆ. ಅಮೆರಿಕ-ಇರಾನ್ ನಡುವಿನ ಉದ್ವಿಗ್ನತೆ ತಗ್ಗಿದ ಬಳಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡುಬಂದಿದ್ದು, ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 80 ಡಾಲರ್‌ಗಿಂತ ಕೆಳಮಟ್ಟಕ್ಕೆ ಇಳಿದಿದೆ.

ಪೆಟ್ರೋಲಿಯಂ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಪಿಪಿಎಸಿ (PPAC) ಮಾಹಿತಿಯ ಪ್ರಕಾರ, ಜೂನ್ 16ರ ವೇಳೆಗೆ ಭಾರತದ ಕಚ್ಚಾ ತೈಲ ಬಾಸ್ಕೆಟ್ ಬೆಲೆ ಬ್ಯಾರಲ್‌ಗೆ 78.66 ಡಾಲರ್‌ಗೆ ತಲುಪಿದೆ. ಮಾರ್ಚ್ ತಿಂಗಳಲ್ಲಿ ಇದು 146.09 ಡಾಲರ್‌ವರೆಗೆ ಏರಿಕೆಯಾಗಿತ್ತು. ಬಳಿಕ ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಹಂತಹಂತವಾಗಿ ಇಳಿಕೆ ಕಂಡು ಇದೀಗ ಗಣನೀಯ ಕುಸಿತ ದಾಖಲಿಸಿದೆ.

ಆದರೆ ಕಚ್ಚಾ ತೈಲದ ಬೆಲೆ ಇಳಿದ ತಕ್ಷಣವೇ ಪೆಟ್ರೋಲ್ ಹಾಗೂ ಡೀಸಲ್ ದರ ಕಡಿಮೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಕಳೆದ ಕೆಲವು ತಿಂಗಳುಗಳಲ್ಲಿ ತೈಲ ಬೆಲೆ ಏರಿಕೆಯಿಂದ ಉಂಟಾದ ನಷ್ಟವನ್ನು ತೈಲ ಮಾರುಕಟ್ಟೆ ಕಂಪನಿಗಳು ಭರಿಸಿಕೊಳ್ಳಲು ಈ ಅವಧಿಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಜೊತೆಗೆ ಸರ್ಕಾರವೂ ಆದಾಯ ನಷ್ಟ ಸರಿದೂಗಿಸಲು ಅಬಕಾರಿ ಸುಂಕದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗುತ್ತಿದೆ.

ಇಂಧನ ದರ ಇಳಿಕೆಯಾಗಿದರೆ ಜನರ ಖರೀದಿ ಸಾಮರ್ಥ್ಯ ಹೆಚ್ಚುವುದರ ಜೊತೆಗೆ ಮಾರುಕಟ್ಟೆಯಲ್ಲಿ ವಹಿವಾಟು ಚುರುಕುಗೊಳ್ಳಲಿದೆ. ಅಲ್ಲದೆ ಹಣದುಬ್ಬರ ನಿಯಂತ್ರಣ, ಉದ್ಯೋಗ ಸೃಷ್ಟಿ ಹಾಗೂ ಆರ್ಥಿಕ ಪ್ರಗತಿಗೂ ಇದು ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆ, ಕಚ್ಚಾ ತೈಲದ ಬೆಲೆ ಇಳಿಕೆಯಾಗಿರುವುದು ದೇಶದ ಆರ್ಥಿಕತೆಗೆ ಸಕಾರಾತ್ಮಕ ಬೆಳವಣಿಗೆಯಾಗಿದ್ದು, ಪೆಟ್ರೋಲ್ ಮತ್ತು ಡೀಸಲ್ ದರ ಕಡಿತದ ಕುರಿತು ಸರ್ಕಾರ ಹಾಗೂ ತೈಲ ಕಂಪನಿಗಳ ಮುಂದಿನ ನಿರ್ಧಾರಗಳತ್ತ ಜನರ ಚಿತ್ತ ನೆಟ್ಟಿದೆ.

LEAVE A REPLY

Please enter your comment!
Please enter your name here