ಲಗ್ಗೆ ಇಟ್ಟ ಕಾಡಾನೆಗಳ ಹಿಂಡು : ಒಂದು ಮರಿ ಆನೆ ಸೇರಿ 6 ಆನೆಗಳು ಪ್ರತ್ಯಕ್ಷ

0
31

ಕಡಬ : ತಾಲೂಕಿನ ಬಳ್ಳ ಪರಿಸರದಲ್ಲಿ ಸಂಚರಿಸುತ್ತಿದ್ದ ಕಾಡಾನೆಗಳ ಹಿಂಡು ಇದೀಗ ಪಕ್ಕದ ಕೋಡಿಂಬಾಳ ಗ್ರಾಮಕ್ಕೆ ಲಗ್ಗೆಯಿಟ್ಟಿದ್ದು, ಕೊರಿಯರ್ ಸಮೀಪದ ಖಾಸಗಿ ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವುದು ಸ್ಥಳೀಯ ಕೃಷಿಕರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ಒಂದು ಮರಿ ಆನೆ ಸೇರಿದಂತೆ ಒಟ್ಟು ಆರು ಕಾಡಾನೆಗಳು ಹಿಂಡಿನಲ್ಲಿ ಇರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಆನೆಗಳ ಚಲನವಲನದ ಬಗ್ಗೆ ಗ್ರಾಮಸ್ಥರು ನಿಗಾ ಇರಿಸಿದ್ದು, ಇದೀಗ ಜನವಸತಿ ಪ್ರದೇಶದ ಸಮೀಪವೇ ಆನೆಗಳು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಮೊದಲಿಗೆ ಬಳ್ಳ ಗ್ರಾಮದ ಪರೋಳಿ ಭಾಗದಲ್ಲಿ ಕಾಡಾನೆಗಳು ಸಂಚರಿಸಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದವು. ಬಳಿಕ ಪಣೋಳಿ ಕಡೆಯಿಂದ ಕಲ್ ಭಾಗದತ್ತ ತೆರಳಿದ ಆನೆಗಳು ದಾರಿಯುದ್ದಕ್ಕೂ ಬೈನೆ ಮರಗಳನ್ನು ಮುರಿದು ಹಾಕಿ ಕೃಷಿಕರ ತೋಟಗಳಿಗೆ ಹಾನಿ ಮಾಡಿವೆ ಎನ್ನಲಾಗಿದೆ.

ಅಲ್ಲಿಂದ ಮುಂದುವರಿದ ಆನೆಗಳ ಹಿಂಡು ಎಣ್ಣೆಮಜಲು ಬಳಿಯ ಬೀರಿಕಾಡು ಪ್ರದೇಶದಲ್ಲಿ ಸಂಚರಿಸಿದ್ದು, ನಂತರ ನದಿಯನ್ನು ದಾಟಿ ಕೋಡಿಂಬಾಳ ಗ್ರಾಮದ ಕೊರಿಯರ್ ಸಮೀಪದಲ್ಲಿರುವ ಖಾಸಗಿ ರಬ್ಬರ್ ತೋಟಕ್ಕೆ ಪ್ರವೇಶಿಸಿದೆ. ಸದ್ಯ ಆರು ಆನೆಗಳು ಇದೇ ಪ್ರದೇಶದಲ್ಲಿ ಬೀಡುಬಿಟ್ಟಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಕಾಡಾನೆಗಳು ತೋಟದೊಳಗೆ ಇರುವುದರಿಂದ ರಬ್ಬರ್ ಟ್ಯಾಪಿಂಗ್ ಸೇರಿದಂತೆ ಕೃಷಿ ಚಟುವಟಿಕೆಗಳಿಗೆ ತೆರಳುವ ಕಾರ್ಮಿಕರು ಹಾಗೂ ಕೃಷಿಕರು ಆತಂಕಗೊಂಡಿದ್ದಾರೆ. ಬೆಳಗ್ಗೆ ಮತ್ತು ಸಂಜೆ ವೇಳೆ ತೋಟಗಳಿಗೆ ತೆರಳುವವರು ಆನೆಗಳ ಚಲನವಲನದ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತಾಗಿದೆ.

ಜನವಸತಿ ಪ್ರದೇಶದ ಸಮೀಪ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆಯೂ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಆನೆಗಳು ತೋಟದಿಂದ ಹೊರಬಂದು ಮನೆಗಳಿರುವ ಪ್ರದೇಶದತ್ತ ಬಂದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಒಂಟಿಯಾಗಿ ಸಂಚರಿಸದಂತೆ ಹಾಗೂ ಕಾಡಾನೆಗಳಿರುವ ಪ್ರದೇಶಕ್ಕೆ ತೆರಳದಂತೆ ಪರಸ್ಪರ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿದ್ದಾರೆ. ರಾತ್ರಿ ವೇಳೆ ಅಗತ್ಯವಿಲ್ಲದೆ ಹೊರಗೆ ತೆರಳದಂತೆ ಕೂಡ ಸ್ಥಳೀಯರು ಮನವಿ ಮಾಡುತ್ತಿದ್ದಾರೆ.

ಕಾಡಾನೆಗಳ ಹಿಂಡು ರಬ್ಬರ್ ತೋಟದಲ್ಲಿ ಬೀಡುಬಿಟ್ಟಿರುವ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಆನೆಗಳ ಚಲನವಲನದ ಬಗ್ಗೆ ಪರಿಶೀಲನೆ ನಡೆಸಿ, ಅವುಗಳನ್ನು ಸುರಕ್ಷಿತವಾಗಿ ಕಾಡಿನತ್ತ ಹಿಮ್ಮೆಟ್ಟಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ಕೈಗೊಳ್ಳುವ ಸಂದರ್ಭದಲ್ಲಿ ಆನೆಗಳಿಗೆ ಯಾವುದೇ ಹಾನಿಯಾಗದಂತೆ ಹಾಗೂ ಸ್ಥಳೀಯರ ಸುರಕ್ಷತೆಗೆ ಆದ್ಯತೆ ನೀಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಕಾಡಾನೆಗಳ ಹಿಂಡು ಸದ್ಯ ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ ಎಂಬುದರ ಕುರಿತು ಅರಣ್ಯ ಇಲಾಖೆ ನಿರಂತರ ನಿಗಾ ವಹಿಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.