ಮೂಡುಬಿದಿರೆ : ತಾಲೂಕಿನ ಪಡುಕೊಣಾಜೆ ಗ್ರಾಮದ ಪೆರಿಬೆಟ್ಟು ವಿದ್ಯಾಸಂಸ್ಥೆಯಲ್ಲಿ ನವೆಂಬರ್ 20ರಂದು ಸೈಬರ್ ಭದ್ರತಾ ಜಾಗೃತಿ ಕಾರ್ಯಕ್ರಮ ನಡೆಯಿತು. ಶಾಲಾಭಿವೃದ್ಧಿ ಸಮಿತಿ, ಹೆತ್ತವರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ನಡೆದ ಈ ಕಾರ್ಯಕ್ರಮದ ಮುಖ್ಯ ಮಾಹಿತಿದಾರರಾಗಿ ಬೆಂಗಳೂರು ಸ್ಪಾರ್ಕ್ ಅಕಾಡೆಮಿಯ ತರಬೇತುದಾರ, ಹಿರಿಯ ಪತ್ರಕರ್ತ, ರಾಜ್ಯ ಗ್ರಾಹಕ ವೇದಿಕೆ ವಿಕಾನ್ ಸದಸ್ಯ ರಾಯಿ ರಾಜಕುಮಾರ ಆಗಮಿಸಿದ್ದರು.
ಅವರು ತಮ್ಮ ಭಾಷಣದಲ್ಲಿ ಸೈಬರ್ ಕೇಂದ್ರಕ್ಕೆ ಹೋಗುವಾಗ, ಅಲ್ಲಿಂದ ಹಿಂತೆರಳುವಾಗ, ವಹಿಸಬೇಕಾದ ಜಾಗರೂಕತೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ಉದಾಹರಣೆಗಳೊಂದಿಗೆ ಒದಗಿಸಿದರು. ಅದೇ ರೀತಿ ಪ್ರತಿಯೊಬ್ಬರ ಕೈಯಲ್ಲಿರುವ ಮೊಬೈಲ್ ಕೂಡ ಎಷ್ಟರಮಟ್ಟಿಗೆ ಖಾಸಗೀತನವನ್ನು ಹೊಂದಿದೆ ಎನ್ನುವುದರ ಬಗ್ಗೆ ಪ್ರಾಯೋಗಿಕ ಮಾಹಿತಿಯನ್ನು ಒದಗಿಸಿದರು. ಇಂದಿನ ಕಾಲಘಟ್ಟದಲ್ಲಿ ಮಾಹಿತಿಯ ಭದ್ರತೆಯ ಅಗತ್ಯದ ಬಗ್ಗೆ, ಜಾಗರೂಕತೆಗಳ ಬಗ್ಗೆ ಸಂಪೂರ್ಣ ವಿವರಗಳನ್ನು ಒದಗಿಸಿ ಅತ್ಯಂತ ಜಾಗರೂಕತೆಯನ್ನು ಹೊಂದುವಂತೆ ಕೇಳಿಕೊಂಡರು.
ಮುಖ್ಯ ಶಿಕ್ಷಕ ಪ್ರಸನ್ನ ಆಚಾರಿ ಅಧ್ಯಕ್ಷತೆಯನ್ನು ವಹಿಸಿದ್ದರು. ಶಿಕ್ಷಕರುಗಳಾದ ರಂಗಣ್ಣ ಕೆ ಸ್ವಾಗತಿಸಿದರು. ವಿನಯ ಹಾಗೂ ಸ್ಮಿತಾ ಕಾರ್ಯಕ್ರಮ ಸಂಘಟಿಸಿದ್ದರು. ಉಷಾ ಕಾರ್ಯಕ್ರಮ ನಿರ್ವಹಿಸಿದರು. ಪ್ರತೀಕ್ಷಾ ವಂದಿಸಿದರು.

