ಕೊಡುಕೊಳ್ಳುವ ವ್ಯವಹಾರದಿಂದ ಸಹಕಾರ ಧರ್ಮ ಬೆಳೆದಿದೆ, ಬೆಳಗಿದೆ. ಕಷ್ಟವನ್ನು ನಿಭಾಯಿಸುವ ಸಂದರ್ಭದಲ್ಲಿ ನೀಡಿದ ಸಹಾಯ ಸದಾ ಸ್ಮರಣೀಯ. ಸೊಸೈಟಿ ಹರಿವ ನದಿಯಂತೆ ಸ್ವಚ್ಛ ಸುಂದರ ಸದಾ ಸಹಾಯದ ಗಣಿ ಎಂದು ಸಂಪಿಗೆ ಚರ್ಚ್ ನ ಧರ್ಮಗುರು ರೆ ಫಾ ವಿನ್ಸೆಂಟ್ ಡಿಸೋಜ ಮೆಚ್ಚುಗೆಯೊಂದಿಗೆ ಆಶೀರ್ವಚನ ನೀಡಿದರು. ಅವರು ನವೆಂಬರ್ 20ರಂದು ಮೂಡುಬಿದರೆ ಎಂಸಿಎಸ್ ಸೊಸೈಟಿಯ ಸಮಗ್ರ ಸಾಧಕ ಪ್ರಶಸ್ತಿಯನ್ನು ಡಾ ಎನ್ ಪ್ರಭಾಚಂದ್ರ ಅವರಿಗೆ ವಿತರಿಸಿ, ಸಹಕಾರ ಸಪ್ತಾಹದ ಸಮಾರೋಪದಲ್ಲಿ ಆಶೀರ್ವಚನ ನೀಡಿದರು.

ಹಳ್ಳಿಯ ಜನರ ಕಡುಬಡತನಕ್ಕೆ ಸ್ಪಂದಿಸಿ ಅಗತ್ಯದ ಸಂದರ್ಭದಲ್ಲಿ ಸ್ವತಹ ಮನೆಗಳಿಗೆ ಭೇಟಿ ನೀಡಿ ಅತ್ಯಂತ ಕಡಿಮೆ ವೆಚ್ಚದಲ್ಲಿ ಡಾಕ್ಟರಿಕೆ ಮಾಡಿದವರು. ಮಕ್ಕಳೊಂದಿಗೆ ಮಕ್ಕಳಾಗಿ ಸುಖ ಕಷ್ಟ ವಿಚಾರಿಸುತ್ತಾ ತಿಳಿಯದಂತೆ ಚುಚ್ಚುಮದ್ದು ನೀಡುವ ಚಾಕಚಕ್ಯತೆ. ಗ್ರಾಮೀಣದಲ್ಲಿ ಎಲ್ಲ ಸೌಲಭ್ಯಗಳನ್ನು ಒದಗಿಸಿದ ಮಹಾನುಭಾವ ಎಂದು ಸ್ವತಃ ಬಲ್ಲ ಎಕ್ಸಲೆಂಟ್ ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಡಾ ಮೋಹನ್ ಆಳ್ವ ಮೆಚ್ಚುಗೆ ವ್ಯಕ್ತಪಡಿಸಿದರು.
ಜನರೊಂದಿಗೆ ಸ್ಪಂದಿಸಿ, ಬೇಕು ಬೇಡಿಕೆ, ನಗುಮುಖದ ಸೇವೆ ಒದಗಿಸಿ ಜನಾನುರಾಗಿಯಾಗಿ ಬೆಳೆದಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು, ಖ್ಯಾತಿ ಗಳಿಸಲು ಕಾರಣ ಸೊಸೈಟಿಯ ವಿಶೇಷ ಕಾಳಜಿಯ ಕಾರ್ಯನಿರ್ವಹಣಾಧಿಕಾರಿಗಳು. ಮೃದು ಮಧುರ ವ್ಯವಹಾರ ಸ್ಪಂದನ, ಮನೋಭಾವದ ಅಧಿಕಾರಿ ವರ್ಗಗಳಿಂದ, ನಿರ್ದೇಶಕರುಗಳಿಂದ, ಅಧ್ಯಕ್ಷರುಗಳಿಂದಾಗಿ ಈ ಉನ್ನತ ಸ್ಥಾನಕ್ಕೆ ಸೊಸೈಟಿ ಬೆಳೆದಿದೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್, ಧನಲಕ್ಷ್ಮಿ ಸಮೂಹ ಸಂಸ್ಥೆಯ ಅಧ್ಯಕ್ಷ ಶ್ರೀಪತಿ ಭಟ್, ಉಪನ್ಯಾಸಕ ಗಣೇಶ್ ಕಾಮತ್ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ವಿಶೇಷ ವ್ಯಕ್ತಿಗಳಿಗೆ, ರಾಂಕ್ ವಿಜೇತರಿಗೆ ಸನ್ಮಾನವನ್ನು ಸಲ್ಲಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ವಿವರಣೆಯನ್ನು ನೀಡಿ ಸಪ್ತ ಸಂಧ್ಯಾ ಚಿಂತನ ಸರಣಿ ಕಾರ್ಯಕ್ರಮ ಯಶಸ್ವಿಯಾಗುವುದಕ್ಕೆ ಎಲ್ಲರನ್ನು ಅಭಿವಂದಿಸಿದರು.
ಸೊಸೈಟಿಯ ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ಅತ್ಯಪೂರ್ವ ಕಾರ್ಯ ಚಟುವಟಿಕೆ, ಯೋಜನೆಗಳನ್ನು ಪ್ರಸ್ತುತಪಡಿಸಿದ್ದರು. ಉದ್ಯೋಗಿ ಸಂತೋಷ್ ನಾಯಕ್ ಬನ್ನಡ್ಕ ಕಾರ್ಯಕ್ರಮ ನಿರ್ವಹಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಭಟ್ ವಂದಿಸಿದರು.

ತರವಾಯ ಕುಮಾರಿ ಅಯನಾ ಅವರ ಏಕವ್ಯಕ್ತಿ ನಾಟಕ ಊರ್ಮಿಳಾ ಪ್ರದರ್ಶನಗೊಂಡಿತು.
ವರದಿ ರಾಯಿ ರಾಜ ಕುಮಾರ್

