ಬೆಂಗಳೂರು : ಪಡಿತರ ಚೀಟಿದಾರರಿಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸುವ ಉದ್ದೇಶದಿಂದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ‘ಅನ್ನಸೇವೆ’ ಎಂಬ ಹೊಸ ಮೊಬೈಲ್ ಆ್ಯಪ್ ಪರಿಚಯಿಸಿದೆ. ಈ ಮೂಲಕ ನ್ಯಾಯಬೆಲೆ ಅಂಗಡಿಗಳಲ್ಲಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲದೆ, ಮನೆಯಲ್ಲೇ ಕುಳಿತು ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ಸದ್ಯ ‘ಅನ್ನಸೇವೆ’ ಆ್ಯಪ್ ಅನ್ನು ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಉಡುಪಿ, ಹಾವೇರಿ, ಕಾರವಾರ, ಬಳ್ಳಾರಿ, ಬೀದರ್ ಹಾಗೂ ಕೊಪ್ಪಳ ಜಿಲ್ಲೆಗಳ ಪಡಿತರ ಚೀಟಿದಾರರು ಈ ಸೇವೆಯ ಪ್ರಯೋಜನ ಪಡೆಯಬಹುದಾಗಿದೆ.
ಪ್ರಾಯೋಗಿಕ ಹಂತದ ನಂತರ ಸುಮಾರು 20 ದಿನಗಳಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ಆ್ಯಪ್ ಸೇವೆಯನ್ನು ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ಇಲಾಖೆ ತಿಳಿಸಿದೆ.
ಸರ್ವರ್ ಸಮಸ್ಯೆಗೆ ಪರಿಹಾರ ನೀಡುವ ಪ್ರಯತ್ನ
ಕೇಂದ್ರ ಸರ್ಕಾರದ ಸೂಚನೆಯಂತೆ ರಾಜ್ಯದಲ್ಲಿ ಇ-ಕೆವೈಸಿ ನವೀಕರಣ ಕಾರ್ಯ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುತ್ತಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿ ಇ-ಕೆವೈಸಿ ಪ್ರಕ್ರಿಯೆಯನ್ನು ಸರಳಗೊಳಿಸಲು ಹೊಸ ಆ್ಯಪ್ ಪರಿಚಯಿಸಲಾಗಿದೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಸುಮಾರು ನಾಲ್ಕೂವರೆ ಕೋಟಿ ಫಲಾನುಭವಿಗಳಿದ್ದು, ಪ್ರತಿಯೊಬ್ಬರಿಗೂ ಸರಿಯಾದ ರೀತಿಯಲ್ಲಿ ಸೇವೆ ತಲುಪಿಸುವುದು ಇಲಾಖೆಯ ಜವಾಬ್ದಾರಿಯಾಗಿದೆ. ಸರ್ವರ್ ಸಮಸ್ಯೆ ಬಗೆಹರಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಹೊಸ ಆ್ಯಪ್ ಮೂಲಕ ಇ-ಕೆವೈಸಿ ಪ್ರಕ್ರಿಯೆ ಮತ್ತಷ್ಟು ಸುಗಮವಾಗಲಿದೆ ಎಂದು ಅವರು ಹೇಳಿದ್ದಾರೆ.
ಹೊಸ ವ್ಯವಸ್ಥೆಯಿಂದ ಪಡಿತರ ಚೀಟಿದಾರರು ಸಮಯ ಉಳಿತಾಯ ಮಾಡಿಕೊಳ್ಳುವುದರ ಜತೆಗೆ, ಇ-ಕೆವೈಸಿ ಪೂರ್ಣಗೊಳಿಸುವ ಪ್ರಕ್ರಿಯೆಯಲ್ಲಿನ ತೊಂದರೆಗಳು ಕಡಿಮೆಯಾಗುವ ನಿರೀಕ್ಷೆಯಿದೆ.

