ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಉಪ್ಪುರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಲಗಿರಿ–ಮಣಿಪಾಲ ಸಂಪರ್ಕಿಸುವ ಪ್ರಮುಖ ರಸ್ತೆಯು ಹಲವು ಸಮಸ್ಯೆಗಳಿಂದಾಗಿ ವಾಹನ ಸವಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಎಂಸಿ ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಉದ್ಯೋಗಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಉಡುಪಿ ನಗರಸಭೆ ವ್ಯಾಪ್ತಿಯ ಪರಂಪಳ್ಳಿ ಶೀಮ್ರಾ ಸೇತುವೆ ಸಮೀಪ, ಉಪ್ಪುರು ಗ್ರಾಮ ಪಂಚಾಯಿತಿಗೆ ಸಂಬಂಧಪಟ್ಟ ರಸ್ತೆಯ ಸೇತುವೆ ಬುಡದಲ್ಲಿ ಬೃಹತ್ ಗಾತ್ರದ ನಾಲ್ಕೈದು ಹೊಂಡಗಳು ನಿರ್ಮಾಣವಾಗಿವೆ. ಸುಮಾರು ಮೂರು ಅಡಿ ಆಳವಿರುವ ಈ ಹೊಂಡಗಳು ಐದಾರು ಅಡಿ ಅಗಲವಾಗಿದ್ದು, ವಾಹನ ಸವಾರರಿಗೆ ಗಂಭೀರ ಅಪಾಯವನ್ನುಂಟುಮಾಡುತ್ತಿವೆ.
ರಸ್ತೆಯ ಎರಡೂ ಬದಿಗಳಲ್ಲೂ ಪೊದೆಗಳು ರಾಶಿಯಾಗಿ ಬೆಳೆದು ನಿಂತಿದ್ದು, ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಂಡಗಳು ಹಾಗೂ ಪೊದೆಗಳಿಂದಾಗಿ ಈಗಾಗಲೇ ಮಹಿಳೆಯರು, ಕೆಎಂಸಿ ಆಸ್ಪತ್ರೆಗೆ ತೆರಳುವ ಉದ್ಯೋಗಿಗಳು, ರೋಗಿಗಳು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಆರೋಪಿಸಿದ್ದಾರೆ.
ಇದರೊಂದಿಗೆ ಸೇತುವೆಯ ಸಮೀಪ ಇರುವ ಅಪಾಯಕಾರಿ ತಿರುವು ಮತ್ತೊಂದು ಪ್ರಮುಖ ಸಮಸ್ಯೆಯಾಗಿದೆ. ಸೇತುವೆಯ ತಿರುವು ಅಪಾಯಕಾರಿಯಾಗಿರುವುದರಿಂದ ಇಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಬದಿಯ ಪೊದೆಗಳು, ಬೃಹತ್ ಹೊಂಡಗಳು ಹಾಗೂ ಅಪಾಯಕಾರಿ ಮರಗಳಿಂದಾಗಿ ವಾಹನ ಸವಾರರು ತೀವ್ರ ಆತಂಕದಿಂದ ಸಂಚರಿಸುವಂತಾಗಿದೆ. ಈ ಪ್ರದೇಶದಲ್ಲಿ ಪ್ರತಿದಿನ ನಾಲ್ಕೈದು ಅಪಘಾತಗಳು ಸಂಭವಿಸುತ್ತಿವೆ ಎನ್ನಲಾಗಿದ್ದು, ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಪರಿಹಾರಕ್ಕೆ ಆಗ್ರಹ
ಅಪಾಯಕಾರಿ ತಿರುವು ಹಾಗೂ ಸೇತುವೆ ಪ್ರದೇಶದಲ್ಲಿರುವ ಪೊದೆಗಳನ್ನು ಶಾಶ್ವತವಾಗಿ ತೆರವುಗೊಳಿಸುವುದು, ಅಪಾಯಕಾರಿ ಮರಗಳನ್ನು ತೆರವುಗೊಳಿಸುವುದು ಮತ್ತು ರಸ್ತೆಯಲ್ಲಿರುವ ಬೃಹತ್ ಗಾತ್ರದ ಹೊಂಡಗಳನ್ನು ತಕ್ಷಣ ಮುಚ್ಚಿ ರಸ್ತೆ ದುರಸ್ತಿ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಾಹನ ಸವಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಎಂಸಿ ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಉದ್ಯೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಪಂಚಾಯಿತಿ ಅಧಿಕಾರಿಗಳು, ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜಸೇವಕ ಸತೀಶ್ ಪೂಜಾರಿ ಕೀಳಂಜೆ ಒತ್ತಾಯಿಸಿದ್ದಾರೆ.
ಬೀದಿ ದೀಪವಿದ್ದರೂ ಕತ್ತಲೆ
ಪರಂಪಳ್ಳಿ ಶೀಮ್ರಾ ಸೇತುವೆ ಮೇಲೆ ಬೀದಿ ದೀಪದ ವ್ಯವಸ್ಥೆ ಇದ್ದರೂ ಅದು ಇದ್ದೂ ಇಲ್ಲದಂತಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ರಾತ್ರಿ ವೇಳೆ ಬೆಳಕಿನ ಕೊರತೆಯಿಂದಾಗಿ ಹೊಂಡಗಳು ಮತ್ತು ರಸ್ತೆ ಬದಿಯ ಪೊದೆಗಳು ವಾಹನ ಸವಾರರಿಗೆ ಸರಿಯಾಗಿ ಕಾಣದೆ ಅಪಘಾತದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಬೀದಿ ದೀಪಗಳನ್ನು ಸಮರ್ಪಕವಾಗಿ ದುರಸ್ತಿಪಡಿಸಿ ನಿರಂತರವಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕು ಎಂಬ ಆಗ್ರಹವೂ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ರಸ್ತೆ ಅಗಲೀಕರಣಕ್ಕೆ ಕ್ರಮ; ಡಾಮರೀಕರಣಕ್ಕೆ ಬೇಡಿಕೆ
ಕೊಳಲಗಿರಿ ಕ್ಯಾಶ್ಯೂ ಫ್ಯಾಕ್ಟರಿಯಿಂದ ಪರಾರಿ ಬೊಬ್ಬರ್ಯ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿಗೆ ಈ ಹಿಂದೆ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ಅವರ ಮನವಿಯ ಮೇರೆಗೆ ಕ್ರಮ ಕೈಗೊಳ್ಳಲಾಗಿತ್ತು. ಉಡುಪಿ ಜಿಲ್ಲೆಯ ಶಾಸಕರಾದ ಯಶ್ಪಾಲ್ ಸುವರ್ಣ ಅವರ ಗಮನಕ್ಕೆ ವಿಷಯವನ್ನು ತಂದ ಬಳಿಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸಿ ರಸ್ತೆಯ ಅಗಲೀಕರಣ ಕಾರ್ಯ ಕೈಗೊಂಡು ಜಲ್ಲಿಕಲ್ಲು ಹಾಕುವ ಮೂಲಕ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದರು ಎಂದು ಅವರು ತಿಳಿಸಿದ್ದಾರೆ.
ಇದೀಗ ಜಲ್ಲಿಕಲ್ಲು ಹಾಕಿರುವ ಈ ರಸ್ತೆಗೆ ಶಾಶ್ವತವಾಗಿ ಡಾಮರೀಕರಣ ಮಾಡುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಈ ರಸ್ತೆಯ ಅಭಿವೃದ್ಧಿಗಾಗಿ ಶಾಸಕರು ಮೂರು ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದ್ದಾರೆ ಎಂದು ತಿಳಿಸಲಾಗಿದ್ದು, ಕಾಮಗಾರಿಯನ್ನು ಶೀಘ್ರವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಮುಖ ಸಂಪರ್ಕ ರಸ್ತೆಯಾಗಿರುವ ಕೊಳಲಗಿರಿ–ಮಣಿಪಾಲ ಮಾರ್ಗದಲ್ಲಿ ದಿನನಿತ್ಯ ಸಾವಿರಾರು ಮಂದಿ ಸಂಚರಿಸುವ ಹಿನ್ನೆಲೆಯಲ್ಲಿ, ರಸ್ತೆ ದುರಸ್ತಿ, ಹೊಂಡ ಮುಚ್ಚುವಿಕೆ, ಪೊದೆ ತೆರವು, ಅಪಾಯಕಾರಿ ಮರಗಳ ತೆರವು ಹಾಗೂ ಸಮರ್ಪಕ ಬೀದಿ ದೀಪದ ವ್ಯವಸ್ಥೆಯನ್ನು ತುರ್ತಾಗಿ ಕೈಗೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಮಸ್ಯೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕೂಡಲೇ ಎಚ್ಚೆತ್ತುಕೊಂಡು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸಾರ್ವಜನಿಕರು, ವಾಹನ ಸವಾರರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಕೆಎಂಸಿ ಆಸ್ಪತ್ರೆಗೆ ತೆರಳುವ ರೋಗಿಗಳು ಮತ್ತು ಉದ್ಯೋಗಿಗಳ ಪರವಾಗಿ ಸತೀಶ್ ಪೂಜಾರಿ ಕೀಳಂಜೆ ಆಗ್ರಹಿಸಿದ್ದಾರೆ.

