ಕುಕ್ಕೆಹಳ್ಳಿ–ಹಿರಿಯಡ್ಕ ರಸ್ತೆಯಲ್ಲಿ ಬೃಹತ್ ಹೊಂಡ : ಅಪಘಾತ ಭೀತಿ, ಶಾಶ್ವತ ಪರಿಹಾರಕ್ಕೆ ಸಾಮಾಜಿಕ ಕಾರ್ಯಕರ್ತ ಸತೀಶ್‌ ಪೂಜಾರಿ ಕೀಳಂಜೆ ಆಗ್ರಹ

0
5

ಉಡುಪಿ: ಉಡುಪಿ ತಾಲೂಕಿನ ಕುಕ್ಕೆಹಳ್ಳಿ–ಹಿರಿಯಡ್ಕ ಸಂಪರ್ಕಿಸುವ ಪ್ರಮುಖ ರಸ್ತೆಯಲ್ಲಿ ಬೃಹತ್ ಗಾತ್ರದ ಹೊಂಡಗಳು ಹಾಗೂ ರಸ್ತೆ ಬದಿಯ ಪೊದೆಗಳ ಸಮಸ್ಯೆಯಿಂದಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಪ್ರಮುಖ ರಸ್ತೆಯ ಮಧ್ಯಭಾಗದಲ್ಲಿ ಸುಮಾರು ಐದಾರು ಅಡಿ ಅಗಲ ಹಾಗೂ ಐದಾರು ಅಡಿ ಆಳದ ಬೃಹತ್ ಹೊಂಡವೊಂದು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ವಿಶೇಷವಾಗಿ ರಾತ್ರಿ ವೇಳೆ ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲದ ಕಾರಣ ಹೊಂಡವು ಗೋಚರಿಸದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಹೊಂಡಕ್ಕೆ ಬಿದ್ದು ಈಗಾಗಲೇ ಹಲವಾರು ಮಂದಿ ಅಪಘಾತಕ್ಕೀಡಾಗಿದ್ದು, ಕೆಲವರು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತಗಳಿಂದಾಗಿ ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿರುವ ಘಟನೆಗಳೂ ನಡೆದಿವೆ ಎಂದು ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ ತಿಳಿಸಿದ್ದಾರೆ.

ದಿನನಿತ್ಯ ಸಾವಿರಾರು ವಾಹನಗಳ ಸಂಚಾರ

ಬ್ರಹ್ಮಾವರ–ಪೇತ್ರಿ–ಕುಕ್ಕೆಹಳ್ಳಿ–ಹಿರಿಯಡ್ಕ–ಕೊಕ್ಕರ್ಣೆ ಹಾಗೂ ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಈ ರಸ್ತೆ ಅತ್ಯಂತ ಪ್ರಮುಖ ಸಂಪರ್ಕ ಮಾರ್ಗವಾಗಿದೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ವಿವಿಧ ಗ್ರಾಮಗಳ ಜನರು ಈ ರಸ್ತೆಯನ್ನು ಅವಲಂಬಿಸಿದ್ದಾರೆ.

ಆದರೆ ರಸ್ತೆ ಬದಿಯಲ್ಲಿ ಪೊದೆಗಳು ರಾಶಿಯಾಗಿ ಬೆಳೆದಿರುವುದು, ಅಲ್ಲಲ್ಲಿ ಬೃಹತ್ ಗಾತ್ರದ ಹೊಂಡಗಳು ನಿರ್ಮಾಣವಾಗಿರುವುದು ಹಾಗೂ ರಾತ್ರಿ ವೇಳೆ ಸಮರ್ಪಕ ಬೀದಿ ದೀಪದ ವ್ಯವಸ್ಥೆ ಇಲ್ಲದಿರುವುದು ವಾಹನ ಸವಾರರಿಗೆ ಅಪಾಯವನ್ನುಂಟುಮಾಡುತ್ತಿದೆ. ಇದರಿಂದಾಗಿ ದಿನನಿತ್ಯ ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವುದಾಗಿ ಸಾರ್ವಜನಿಕರು ದೂರಿದ್ದಾರೆ.

ರಸ್ತೆ ಮೇಲ್ದರ್ಜೆಗೇರಿಸಲು ಆಗ್ರಹ

ಈ ರಸ್ತೆ ಸಂಬಂಧಪಟ್ಟ ಎರಡು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಒಳಪಟ್ಟಿದ್ದು, ಪಿಡಬ್ಲ್ಯೂಡಿ ರಸ್ತೆಯ ವ್ಯಾಪ್ತಿಯಲ್ಲಿದೆ ಎಂದು ತಿಳಿಸಿರುವ ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜೆ, ರಸ್ತೆಯ ದುಸ್ಥಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.

ರಸ್ತೆಯಲ್ಲಿರುವ ಬೃಹತ್ ಹೊಂಡಗಳನ್ನು ಕೂಡಲೇ ಮುಚ್ಚುವುದು, ರಸ್ತೆ ಬದಿಯ ಪೊದೆಗಳನ್ನು ತೆರವುಗೊಳಿಸುವುದು, ಅಗತ್ಯವಿರುವ ಕಡೆ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಕಲ್ಪಿಸುವುದು ಹಾಗೂ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ಸುರಕ್ಷತಾ ಕ್ರಮ ಕೈಗೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಅವರು ಹೇಳಿದ್ದಾರೆ.

ಸಾರ್ವಜನಿಕರ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ಕುಕ್ಕೆಹಳ್ಳಿ–ಹಿರಿಯಡ್ಕ ಸಂಪರ್ಕ ರಸ್ತೆಯನ್ನು ಶೀಘ್ರವಾಗಿ ಮೇಲ್ದರ್ಜೆಗೇರಿಸಿ ಸಮಗ್ರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ಈ ಮೂಲಕ ದಿನನಿತ್ಯ ಸಂಭವಿಸುತ್ತಿರುವ ಅಪಘಾತಗಳಿಗೆ ಕಡಿವಾಣ ಹಾಕಿ, ಸಾರ್ವಜನಿಕರಿಗೆ ಸುರಕ್ಷಿತ ಸಂಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಸತೀಶ್ ಪೂಜಾರಿ ಕೀಳಂಜೆ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.