ಪೆರ್ಡೂರು–ಕೆಜಿ ರಸ್ತೆ ಬದಿ ಅಪಾಯಕಾರಿ ಮರಗಳು : ಭಾರಿ ಅನಾಹುತಕ್ಕೂ ಮುನ್ನ ಕ್ರಮ ಕೈಗೊಳ್ಳಿ -ಸಾಮಾಜಿಕ ಕಾರ್ಯಕರ್ತ ಸತೀಶ್ ಪೂಜಾರಿ ಕೀಳಂಜಿ ಒತ್ತಾಯ

0
4

ಉಡುಪಿ: ಪೆರ್ಡೂರು–ಕೆಜಿ ರಾಜ್ಯ ರಸ್ತೆಯ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಬೃಹತ್ ಮರಗಳು ಹಾಗೂ ಒಣಗಿದ ಕೊಂಬೆಗಳು ಸಾರ್ವಜನಿಕರ ಜೀವಕ್ಕೆ ಭಾರೀ ಅಪಾಯವನ್ನುಂಟು ಮಾಡುತ್ತಿರುವ ಹಿನ್ನೆಲೆಯಲ್ಲಿ ತಕ್ಷಣವೇ ಅವುಗಳನ್ನು ಗುರುತಿಸಿ ತೆರವುಗೊಳಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಸಮಾಜ ಸೇವಕರಾದ ಸತೀಶ್ ಪೂಜಾರಿ ಕೀಳಂಜಿ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಈ ರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 500ಕ್ಕೂ ಹೆಚ್ಚು ಅಪಾಯಕಾರಿ ಮರಗಳು ರಸ್ತೆಯತ್ತ ಬಾಗಿಕೊಂಡಿದ್ದು, ಅನೇಕ ಮರಗಳ ಒಣಗಿದ ಕೊಂಬೆಗಳು ರಸ್ತೆಯ ಮೇಲೆ ಚಾಚಿಕೊಂಡಿರುವುದರಿಂದ ಗಾಳಿ-ಮಳೆಯ ಸಂದರ್ಭಗಳಲ್ಲಿ ಯಾವ ಕ್ಷಣದಲ್ಲಾದರೂ ಕುಸಿದು ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಪೆರ್ಡೂರು–ಕೆಜಿ ರಸ್ತೆ ಉಡುಪಿ ಜಿಲ್ಲೆಯ ಪ್ರಮುಖ ಸಂಪರ್ಕ ಮಾರ್ಗಗಳಲ್ಲಿ ಒಂದಾಗಿದ್ದು, ಈ ರಸ್ತೆಯಲ್ಲಿ ದಿನದ 24 ಗಂಟೆಯೂ ಶಾಲಾ ವಾಹನಗಳು, ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಹಾಗೂ ಮಣಿಪಾಲ ಕೆಎಂಸಿ ಆಸ್ಪತ್ರೆ, ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಿಗೆ ತೆರಳುವ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಪಾಯಕಾರಿ ಮರಗಳು ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಸವಾಲಾಗಿ ಪರಿಣಮಿಸಿವೆ ಎಂದು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳಲ್ಲಿ ರಸ್ತೆ ಬದಿಯ ಮರಗಳು ಕುಸಿದು ಶಾಲಾ ವಾಹನಗಳ ಮೇಲೂ ಸೇರಿದಂತೆ ಹಲವು ವಾಹನಗಳ ಮೇಲೆ ಬಿದ್ದು ಮಕ್ಕಳು ಸಾವನ್ನಪ್ಪಿದ ಘಟನೆಗಳು ಹಾಗೂ ಅನೇಕ ದ್ವಿಚಕ್ರ ವಾಹನ ಸವಾರರು ಶಾಶ್ವತ ಅಂಗವೈಕಲ್ಯಕ್ಕೊಳಗಾದ ಘಟನೆಗಳು ವರದಿಯಾಗಿವೆ. ಇದೇ ರೀತಿಯ ದುರ್ಘಟನೆ ಈ ರಸ್ತೆಯಲ್ಲೂ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.

ಈ ರಸ್ತೆಗೆ ಸಂಬಂಧಿಸಿದ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ (PWD), ಸಂಬಂಧಿತ ನಾಲ್ಕು ಗ್ರಾಮ ಪಂಚಾಯಿತಿಗಳು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಅಪಾಯಕಾರಿ ಮರಗಳು ಮತ್ತು ಒಣಗಿದ ಕೊಂಬೆಗಳನ್ನು ತಕ್ಷಣ ಗುರುತಿಸಿ ತೆರವುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದಲ್ಲದೆ, ಉಡುಪಿ ಜಿಲ್ಲೆಯಾದ್ಯಂತ ರಾಜ್ಯ ರಸ್ತೆ, ಪಿಡಬ್ಲ್ಯುಡಿ ರಸ್ತೆ, ಜಿಲ್ಲಾ ಪಂಚಾಯಿತಿ ರಸ್ತೆ, ಗ್ರಾಮ ಪಂಚಾಯಿತಿ ರಸ್ತೆ ಹಾಗೂ ರಾಷ್ಟ್ರೀಯ ಹೆದ್ದಾರಿಗಳ ಬದಿಯಲ್ಲಿರುವ ಅಪಾಯಕಾರಿ ಮರಗಳ ಸಮಗ್ರ ಸಮೀಕ್ಷೆ ನಡೆಸಿ, ಅಪಾಯಕಾರಿಯಾಗಿ ಗುರುತಿಸಲಾದ ಮರಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸುವ ಮೂಲಕ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರ ಜೀವಹಾನಿಯನ್ನು ತಪ್ಪಿಸಲು ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಸತೀಶ್ ಪೂಜಾರಿ ಕೀಳಂಜಿ ಆಗ್ರಹಿಸಿದ್ದಾರೆ.