
ಪುತ್ತೂರು : ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಉಂಟುಮಾಡುವ ಹಾಗೂ ಸಾರ್ವಜನಿಕ ಶಾಂತಿ ಕದಡುವ ರೀತಿಯ ಸಂದೇಶಗಳನ್ನು ಪ್ರಸಾರ ಮಾಡಿ ಬಂದ್‌ಗೆ ಕರೆ ನೀಡಿದ ಆರೋಪದಡಿ ದಿನೇಶ್ ಪಂಜಿಗ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಈ ಹಿಂದೆ ದಿನೇಶ್ ಪಂಜಿಗ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಹೈಕೋರ್ಟ್ ನಿರ್ದೇಶನ ನೀಡಿತ್ತು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಧೀರ್ಘ ವಾದವನ್ನು ಆಲಿಸಿದ ಹೈಕೋರ್ಟ್ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರ ಪೀಠ, ದಿನೇಶ್ ಪಂಜಿಗ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ತಡೆ ಆಜ್ಞೆ ನೀಡಿದೆ.
ದಿನೇಶ್ ಪಂಜಿಗ ಪರವಾಗಿ ಖ್ಯಾತ ನ್ಯಾಯವಾದಿ ಡಾ. ಅರುಣ್ ಶ್ಯಾಮ್ ಅವರು ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.
ದರ್ಬೆ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಪಂಜಿಗರಿಗೆ ಪುತ್ತೂರು ನ್ಯಾಯಾಲಯದಲ್ಲಿ ಜಾಮೀನು ದೊರಕಿಸುವಲ್ಲಿ ಖ್ಯಾತ ನ್ಯಾಯವಾದಿಗಳಾದ ಮಹೇಶ್ ಕಜೆ ಹಾಗೂ ಸಂತೋಷ್ ಕುಮಾರ್ ಯಶಸ್ವಿಯಾಗಿದ್ದರು.
ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತಡೆ ನೀಡಿದ್ದು, ದಿನೇಶ್ ಪಂಜಿಗರಿಗೆ ಮತ್ತಷ್ಟು ಕಾನೂನುಬದ್ಧ ರಿಲೀಫ್ ದೊರೆತಿದೆ.
