ಗುತ್ತಿಗೆ ಕಾರ್ಮಿಕರಿಗೂ ಸಮಾನ ಹಕ್ಕು, ಸೌಲಭ್ಯ ಕಲ್ಪಿಸಲು ಒತ್ತಾಯ

0
9

ಸುರತ್ಕಲ್: ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಸೂಕ್ತ ವೈದ್ಯಕೀಯ ಸೌಲಭ್ಯ, ವಿಮೆ, ಉದ್ಯೋಗ ಭದ್ರತೆ ಸೇರಿದಂತೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಎಂಆರ್‌ಪಿಎಲ್–ಎಂಎಸ್‌ಇಝಡ್ ಗುತ್ತಿಗೆ ಕಾರ್ಮಿಕರು ಹಾಗೂ ಸಂತ್ರಸ್ತರ ಹೋರಾಟ ಸಮಿತಿ ಆಗ್ರಹಿಸಿದೆ.

ಇತ್ತೀಚೆಗೆ ಎಂಆರ್‌ಪಿಎಲ್ ಸಂಸ್ಥೆಯಲ್ಲಿ ಸಂಭವಿಸಿದ ಅವಘಡದಲ್ಲಿ ಮೃತಪಟ್ಟ ಗುತ್ತಿಗೆ ಕಾರ್ಮಿಕ ಮಣಿ ಕರ್ಕಡ ಅವರ ಕುಟುಂಬಕ್ಕೆ ಹೋರಾಟದ ಫಲವಾಗಿ ಸಂಸ್ಥೆಯಿಂದ ರೂ.90 ಲಕ್ಷ, ರೂ.10 ಲಕ್ಷ ವಿಮೆ ಹಾಗೂ ಇತರ ಮೂಲಗಳಿಂದ ರೂ.20 ಲಕ್ಷ ಸೇರಿದಂತೆ ಒಟ್ಟು ರೂ.1.20 ಕೋಟಿ ಪರಿಹಾರ ದೊರೆತಿದೆ ಎಂದು ಸಮಿತಿ ತಿಳಿಸಿದೆ.

ಎಂಆರ್‌ಪಿಎಲ್‌ನಲ್ಲಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರು ಹಾಗೂ ಅವರ ಕುಟುಂಬಗಳಿಗೆ ಯಾವುದೇ ಸಮರ್ಪಕ ವೈದ್ಯಕೀಯ ಸೌಲಭ್ಯಗಳಿಲ್ಲ. ಆದ್ದರಿಂದ ಕನಿಷ್ಠ ರೂ.10 ಲಕ್ಷದ ಆರೋಗ್ಯ ವಿಮೆಯನ್ನು ತಕ್ಷಣ ಜಾರಿಗೆ ತರಬೇಕು. ಪ್ರಸ್ತುತ ಇರುವ ರೂ.10 ಲಕ್ಷ ಕಾರ್ಮಿಕ ಪರಿಹಾರ ಮೊತ್ತವನ್ನು ರೂ.25 ಲಕ್ಷಕ್ಕೆ ಹೆಚ್ಚಿಸಿ, ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕಾರ್ಮಿಕ ಮೃತಪಟ್ಟರೆ ಕನಿಷ್ಠ ರೂ.1 ಕೋಟಿ ಪರಿಹಾರ ನೀಡಬೇಕು ಎಂದು ಆಗ್ರಹಿಸಲಾಯಿತು.

ಕಾರ್ಮಿಕರಿಗೆ ದೊರೆಯಬೇಕಾದ ವಿಮೆ, ಪರಿಹಾರ ಹಾಗೂ ಇತರ ಸೌಲಭ್ಯಗಳನ್ನು ಮಧ್ಯವರ್ತಿಗಳ ಮೂಲಕವಲ್ಲದೆ ನೇರವಾಗಿ ಗುತ್ತಿಗೆ ಕಾರ್ಮಿಕರಿಗೆ ದೊರೆಯುವಂತೆ ವ್ಯವಸ್ಥೆ ಮಾಡಬೇಕು. ಸಂಸ್ಥೆಯಲ್ಲಿ ತುರ್ತು ಅವಘಡ ಸಂಭವಿಸಿದ ಸಂದರ್ಭದಲ್ಲಿ ಕಾರ್ಮಿಕರಿಗೆ ತಕ್ಷಣ ಮಾಹಿತಿ ತಲುಪುವಂತೆ ಪರಿಣಾಮಕಾರಿ ಸೈರನ್ ವ್ಯವಸ್ಥೆ ಅಳವಡಿಸಬೇಕು. ಎಂಆರ್‌ಪಿಎಲ್ ಆಸ್ಪತ್ರೆಯನ್ನು ಸರ್ಕಾರದ ನಿಯಮಾನುಸಾರ ನೋಂದಾಯಿಸಿ ಕಾರ್ಮಿಕರಿಗೆ ಸಮರ್ಪಕ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಸಂಸ್ಥೆಯ ವರ್ಕ್‌ಶಾಪ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಮೃತಪಟ್ಟ ದಿವಂಗತ ಕೇಶವ್ ಅವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಿ, ಕುಟುಂಬದ ಸದಸ್ಯರಿಗೆ ಉದ್ಯೋಗ ಕಲ್ಪಿಸಬೇಕು. ಎಂಆರ್‌ಪಿಎಲ್‌ನ ಸುರಕ್ಷತಾ ವಿಭಾಗದಲ್ಲಿ ಗುತ್ತಿಗೆ ಆಧಾರದಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ಅಗ್ನಿಶಾಮಕ ದಳದ ಕಾರ್ಮಿಕರನ್ನು ಖಾಯಂ ಅಥವಾ ಟ್ರಸ್ಟ್ ಮೂಲಕ ನೇಮಕ ಮಾಡಿಕೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.

ನೇರ ನೌಕರರು ಹಾಗೂ ಗುತ್ತಿಗೆ ಕಾರ್ಮಿಕರ ನಡುವೆ ಇರುವ ತಾರತಮ್ಯ ನೀತಿಯನ್ನು ಕೊನೆಗಾಣಿಸಬೇಕು. ಎಂಟು ಗಂಟೆಗಿಂತ ಹೆಚ್ಚು ಕೆಲಸ ಮಾಡುವ ಕಾರ್ಮಿಕರಿಗೆ ಹೆಚ್ಚುವರಿ ಕೆಲಸದ ವೇತನ ನೀಡಬೇಕು. ಸುರಕ್ಷತಾ ವಿಚಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು. ಗುತ್ತಿಗೆ ಕಾರ್ಮಿಕರಿಗೆ ದೊರೆಯಬೇಕಾದ ವಿಮೆ ಮತ್ತು ಇತರ ಸೌಲಭ್ಯಗಳಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

ಮಹಿಳಾ ಕಾರ್ಮಿಕರು ಸೇರಿದಂತೆ ಕಾರ್ಮಿಕರಿಗೆ ಸಂಸ್ಥೆಯೊಳಗೆ ವಿಶ್ರಾಂತಿ ಪಡೆಯಲು ಹಾಗೂ ಬಟ್ಟೆ ಬದಲಾಯಿಸಲು ಅಗತ್ಯ ಕೊಠಡಿಗಳನ್ನು ಕಲ್ಪಿಸಬೇಕು. ನಿವೃತ್ತಿಯ ಸಂದರ್ಭದಲ್ಲಿ ಕನಿಷ್ಠ ರೂ.10 ಲಕ್ಷ ಗೌರವಧನ ನೀಡಬೇಕು. ಅನುಭವದ ಆಧಾರದ ಮೇಲೆ ಮುಂಬಡ್ತಿ ನೀಡುವ ವ್ಯವಸ್ಥೆ ಜಾರಿಗೆ ಬರಬೇಕು ಎಂದು ಸಮಿತಿ ಆಗ್ರಹಿಸಿದೆ.

ಕಾರ್ಮಿಕ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಜಯಶೆಟ್ಟಿಯವರನ್ನು ಮರುನೇಮಕ ಮಾಡಬೇಕು. ಕಾರ್ಮಿಕರ ಸಮಸ್ಯೆಗಳು ಹಾಗೂ ಅವುಗಳಿಗೆ ಕೈಗೊಂಡಿರುವ ಪರಿಹಾರ ಕ್ರಮಗಳ ಮಾಹಿತಿಯನ್ನು ಕಾರ್ಮಿಕ ಸಂಘಟನೆಗೆ ನೀಡಬೇಕು. ಪ್ರತಿ ಎರಡು ತಿಂಗಳಿಗೊಮ್ಮೆ ಕಾರ್ಮಿಕ ಸಂಘಟನೆಗಳ ಮಧ್ಯಸ್ಥಿಕೆಯಲ್ಲಿ ಆಡಳಿತ ಮಂಡಳಿಯೊಂದಿಗೆ ಸಭೆ ನಡೆಸಬೇಕು ಎಂದು ಒತ್ತಾಯಿಸಲಾಯಿತು.

ಗುತ್ತಿಗೆ ಕಾರ್ಮಿಕರು ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಕಾಯಂ ನೌಕರರಿಂದ ಮೇಲ್ವಿಚಾರಣೆ ನಡೆಯಬೇಕು. ಮೃತಪಟ್ಟ ಕಾಯಂ ನೌಕರರ ಕುಟುಂಬಗಳಿಗೆ ಅನುಕಂಪದ ಆಧಾರದ ಮೇಲೆ ಉದ್ಯೋಗ ಹಾಗೂ ಸೂಕ್ತ ಪರಿಹಾರ ನೀಡಬೇಕು. ಸಮಸ್ಯೆಗಳ ಕುರಿತು ಧ್ವನಿ ಎತ್ತುವ ಕಾರ್ಮಿಕರಿಗೆ ರೋಟೇಶನ್ ಮೂಲಕ ಕಿರುಕುಳ ನೀಡುವುದು ಹಾಗೂ ಅಗತ್ಯ ಮಾಹಿತಿಯನ್ನು ನೀಡದಿರುವ ಕ್ರಮ ನಿಲ್ಲಬೇಕು ಎಂದು ಸಮಿತಿ ಆಗ್ರಹಿಸಿತು.

10–15 ವರ್ಷಗಳಿಂದ ಸಂಸ್ಥೆಗಾಗಿ ದುಡಿಯುತ್ತಿರುವ ಗುತ್ತಿಗೆ ಕಾರ್ಮಿಕರನ್ನು ವಿದ್ಯಾರ್ಹತೆಯ ಕೊರತೆಯ ನೆಪದಲ್ಲಿ ಕೆಲಸದಿಂದ ತೆಗೆದುಹಾಕುವ ಪ್ರಯತ್ನ ನಡೆಯಬಾರದು. ಅಂತಹ ಕಾರ್ಮಿಕರಿಗೆ ಅಗತ್ಯ ತರಬೇತಿ ನೀಡಿ ಅವರ ಸೇವೆಯನ್ನು ಮುಂದುವರಿಸಬೇಕು ಎಂದು ಸಮಿತಿ ಒತ್ತಾಯಿಸಿದೆ.

ಎಂಆರ್‌ಪಿಎಲ್ ಸಂಸ್ಥೆಯಿಂದ ಹೊರಸೂಸುವ ದುರ್ಗಂಧ ಹಾಗೂ ಕೊಳಚೆ ನೀರಿನ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಬೇಕು. ಸಂಸ್ಥೆಯ ಸಿಎಸ್‌ಆರ್ ಅನುದಾನವನ್ನು ಸ್ಥಳೀಯ ಪ್ರದೇಶಗಳ ಅಭಿವೃದ್ಧಿಗೆ ಸಮರ್ಪಕವಾಗಿ ಬಳಸಬೇಕು. ಸಂಸ್ಥೆಯ ಪ್ರಮುಖರು, ಸ್ಥಳೀಯರು, ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಒಳಗೊಂಡು ಕನಿಷ್ಠ ಮೂರು ತಿಂಗಳಿಗೊಮ್ಮೆ ಪರಾಮರ್ಶಾ ಸಭೆ ನಡೆಸಬೇಕು ಎಂದು ಹೋರಾಟ ಸಮಿತಿ ಆಗ್ರಹಿಸಿದೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತರ ಹೋರಾಟ ಸಮಿತಿಯ ಪರವಾಗಿ ಸತ್ಯಜಿತ್ ಸುರತ್ಕಲ್ ಮಾತನಾಡಿದರು. ಈ ಸಂದರ್ಭದಲ್ಲಿ ಎತ್ತಿನಹೊಳೆ ಹೋರಾಟ ಸಮಿತಿಯ ಶಶಿರಾಜ್ ಶೆಟ್ಟಿ ಕೊಳಂಬೆ, ಕೆಪಿಟಿಎಂಎಸ್ ಜಿಲ್ಲಾಧ್ಯಕ್ಷ ಯಶ್‌ಪಾಲ್ ಸುವರ್ಣ, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ತುಷಾರ್ ಕದ್ರಿ ಹಾಗೂ ತುಳುನಾಡು ರಕ್ಷಣಾ ವೇದಿಕೆಯ ಪ್ರಶಾಂತ್ ಭಟ್ ಉಪಸ್ಥಿತರಿದ್ದರು.

ವರದಿ: ರಾಯಿ ರಾಜಕುಮಾರ್