ಶಾಲಾ ಬಾಲಕರ ಮಧ್ಯೆ ನಡೆದ ಘರ್ಷಣೆ ಕೊನೆಗೆ ಭೀಕರ ದುರಂತಕ್ಕೆ ತಿರುಗಿದೆ. ಎಸ್‌ಎಸ್‌ಎಲ್‌ಸಿ (SSLC) ಓದುತ್ತಿದ್ದ ಬಾಲಕನೊಬ್ಬನನ್ನು ಅದೇ ವಯಸ್ಸಿನ ಮೂವರು ಬಾಲಕರು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣದಲ್ಲಿ ನಡೆದಿದೆ.
ಮೃತ ಬಾಲಕನನ್ನು ಕುಂದಗೋಳ ಪಟ್ಟಣದ ನಿವಾಸಿ ನಿಂಗರಾಜ್ (16) ಎಂದು ಗುರುತಿಸಲಾಗಿದೆ. ಆತ ಕುಂದಗೋಳದ ಅನುದಾನಿತ ಶಾಲೆಯಲ್ಲಿ SSLC ವಿದ್ಯಾಭ್ಯಾಸ ಮಾಡುತ್ತಿದ್ದನು. ಆರೋಪಿಗಳೂ ಸಹ ಅಪ್ರಾಪ್ತ ವಯಸ್ಸಿನವರಾಗಿದ್ದು, ಅವರಲ್ಲಿ ಒಬ್ಬನು ಇದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ಎನ್ನಲಾಗಿದೆ.
ಈ ದುರ್ಘಟನೆಗೆ ಶಾಲೆಯಲ್ಲಿ ನಡೆದ ಕ್ಷುಲ್ಲಕ ವಿಚಾರವೇ ಕಾರಣ ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಿಂಗರಾಜ್ ಹಾಗೂ ಕೆಲ ಸಹಪಾಠಿಗಳ ನಡುವೆ ಸಣ್ಣ ವಿಚಾರಕ್ಕೆ ಜಗಳ ನಡೆದಿತ್ತು. ಈ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿಯೊಬ್ಬ, SSLC ಡ್ರಾಪ್‌ಔಟ್ ಆಗಿದ್ದ ತನ್ನ ಇನ್ನಿಬ್ಬರು ಸ್ನೇಹಿತರನ್ನು ಕರೆದುಕೊಂಡು ಬಂದು ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.
ಸಂಜೆ ವೇಳೆ ಮೂವರು ಬಾಲಕರು ನಿಂಗರಾಜ್ ಮೇಲೆ ಏಕಾಏಕಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡ ನಿಂಗರಾಜ್ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ತಕ್ಷಣ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

