ಜಿಲ್ಲೆಯಲ್ಲಿ 4,756 ಹಸ್ತಪ್ರತಿಗಳ ದಾಖಲೆ ಡಿಜಿಟಲೀಕರಣ

0
20

ಉಡುಪಿ : ಹಸ್ತ ಪ್ರತಿಗಳ ಸಂರಕ್ಷಣೆ ಶ್ರೀಮಂತ ಐತಿಹಾಸಿಕ ಮತ್ತು ಸಾಂಸತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಮಹತ್ವದ ಕಾರ್ಯವಾಗಿದೆ. ಜಿಲ್ಲೆಯಲ್ಲಿ 4,756 ಹಸ್ತಪ್ರತಿಗಳ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಜನಸಾಮಾನ್ಯರು ತಮ್ಮ ಬಳಿ ಇರುವ ಹಸ್ತಪ್ರತಿಗಳ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ ಕರೆ ನೀಡಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜ್ಞಾನ ಭಂಡಾರ ಹಸ್ತ ಪ್ರತಿಗಳು ಮತ್ತು ಡಿಜಿಟಲೀಕರಣ ಅಧಿನಿಯಮ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಳೆಯ ತಾಳೆ ಗರಿಗಳು ಹಾಗೂ ಅಮೂಲ್ಯ ಹಸ್ತಪ್ರತಿಗಳು ನಶಿಸಿಹೋಗದಂತೆ ತಡೆಯಲು ಜ್ಞಾನ ಭಾರತಂ ಮಿಷನ್​ ಯೋಜನೆಯಡಿಯಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ಡಿಜಿಟಲ್​ ರೂಪಾಂತರ ಮಾಡಲಾಗುತ್ತಿದೆ. ಈ ಕಾರ್ಯಕ್ಕೆ ಜಿಲ್ಲೆಯ ಜನತೆ ಅಗತ್ಯ ಸಹಕಾರ ನೀಡಬೇಕು. ರಾಜ್ಯದಾದ್ಯಂತ ಪ್ರಾಚಿನ ಹಸ್ತಪ್ರತಿಗಳ ಸಮೀಕ್ಷೆ ಹಾಗೂ ಡಿಜಿಟಲೀಕರಣ ಕಾರ್ಯ ಈಗಾಗಲೇ ಆರಂಭವಾಗಿದೆ. ದೇಶದಾದ್ಯಂತ ಒಂದು ಕೋಟಿಗೂ ಹೆಚ್ಚು ಹಸ್ತಪ್ರತಿಗಳನ್ನು ಡಿಜಿಟಲೀಕರಣ ಗೊಳಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಒಟ್ಟು 4 ಲಕ್ಷಕ್ಕೂ ಹೆಚ್ಚು ಹಸ್ತಪ್ರತಿಗಳು ಡಿಜಿಟಲೀಕರಣಗೊಂಡಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ ವಿಶ್ವ ವಿದ್ಯಾಲಯಗಳು, ಮಠಗಳು, ಶಿಲ್ಪಿಗಳು, ಜೋತಿಷ್ಯರು, ಅರ್ಚಕರ ಮನೆಗಳು, ಸಾಂಸ್ಥಿಕ ಭಂಡಾರಗಳು, ದೇವಾಲಯಗಳು, ಗ್ರಂಥಾಲಯಗಳು, ಆಶ್ರಮಗಳು, ಜೈನ ಬಸದಿಯವರು, ಆಯುರ್ವೇದ ಪಂಡಿತರು, ಖಾಸಗಿ ವ್ಯಕ್ತಿಗಳು ತಮ್ಮ ಸಂಗ್ರಹದಲ್ಲಿ ಹಳೆಯ ಕೈಬರಹ, ಹಸ್ತಪ್ರತಿ ದಾಖಲೆಗಳು ಲಭ್ಯವಿದ್ದಲ್ಲಿ ನೇರವಾಗಿ ಜ್ಞಾನ ಭಾರತಂ ಆ್ಯಪ್​ ಮೂಲಕ ಅಪ್ಲೋಡ್​ ಮಾಡಬಹುದಾಗಿದೆ. ಜೊತೆಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲಿ ಸಮೀಕ್ಷೆದಾರರು ತಮ್ಮಲ್ಲಿಗೆ ಬಂದು ದಾಖಲಿಸಿಕೊಳ್ಳಲಿದ್ದಾರೆ. ಡಿಜಿಟಲೀಕರಣ ಗೊಳಿಸಿದ ನಂತರ ತಮ್ಮ ಮೂಲ ಹಸ್ತಪ್ರತಿಗಳಿಗೆ ಹಾನಿಯಾಗದಂತೆ ಸುರಕ್ಷಿತವಾಗಿ ವಾಪಸು ನೀಡಲಾಗುವುದು ಎಂದರು.

ತಾಳೆಗರಿ ಹಾಗೂ ಹಳೆಯ ಹಸ್ತಪ್ರತಿಗಳು, ಇತರೆ ರೂಪಗಳಲ್ಲಿ ಬರೆಯಲ್ಪಟ್ಟ ಪ್ರಾಚಿನ ವಿಜ್ಞಾನ, ಸಾಹಿತ್ಯ, ವೈದ್ಯಕಿಯ ಹಾಗೂ ಧಾರ್ಮಿಕ ಜ್ಞಾನ ಗಳನ್ನು ಒಳಗೊಂಡಿದೆ. ಇವುಗಳ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಡಿಜಿಟಲೀಕರಣಗೊಂಡ ಹಸ್ತಪ್ರತಿಗಳು ಭವಿಷ್ಯದಲ್ಲಿ ಸಂಶೋಧಕರಿಗೆ ಸಂಶೋಧನೆ ಮಾಡಲು ಅನುಕೂಲವಾಗಿಲಿದೆ ಎಂದರು.

ಹಸ್ತಪ್ರತಿಗಳಲ್ಲಿರುವ ಭಾಷಾಲಿಪಿ, ಶೈಲಿ, ಔಷಧೀಯ ವಿವರ, ವಿಗ್ರಹಗಳನ್ನು ಕೆತ್ತಲು ಅಳತೆ ಮಾಡುವ ವಿಧಾನ, ಪೂರ್ವಜರ ಆಚಾರ- ವಿಚಾರಗಳು, ಕಲಾ ಕೈ ಚಳಕಗಳು ಸೇರಿದಂತೆ ಅವರಲ್ಲಿದ್ದ ಜ್ಞಾನ ವನ್ನು ತಿಳಿಯಲು, ಅದನ್ನು ಮುಂದುವರೆಸಿಕೊಂಡು ಹೋಗಲು ಹಸ್ತಪ್ರತಿಗಳು ಸಹಕಾರಿಯಾಗಲಿವೆ ಎಂದರು.

ಸಭೆಯಲ್ಲಿ ಪೌರಾಯುಕ್ತ ಮಹಾಂತೇಶ್​ ಹಂಗರಗಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ವಿಂದ್ಯಾ ಎನ್​. ಎಂ., ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಧನಲಕ್ಷ್ಮೀ ಜಿಲ್ಲಾ ವಿಶ್ವಕರ್ಮ ಅಸೋಸಿಯೇಶನ್​ ಅಧ್ಯಕ್ಷ ಹರೀಶ್​ ಆಚಾರ್ಯ, ಆಯುಷ್​ ಫೆಡರೇಶನ್​ ಆಫ್​ ಇಂಡಿಯಾ ಜಿಲ್ಲಾ ಅಧ್ಯಕ್ಷ ಡಾ. ಟಿ.ಎನ್​. ಅಂಚನ್​, ಸಾಲಿಗ್ರಾಮ ವಲಯ ಬ್ರಾಹ್ಮಣರ ಸಂಘದ ಅಧ್ಯಕ್ಷ ಪಟ್ಟಾಭಿ ಸೋಮಯಾಜಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here