15ರ ಬಾಲಕಿಯ ಹೊಟ್ಟೆಯಲ್ಲಿ 750 ಗ್ರಾಂ ಕೂದಲು!!
ಕೂದಲು ತಿನ್ನುವ ವಿಚಿತ್ರ ಅಭ್ಯಾಸದಿಂದ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ 15 ವರ್ಷದ ಬಾಲಕಿಯ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ 750 ಗ್ರಾಂ ಕೂದಲನ್ನು ಯಶಸ್ವಿಯಾಗಿ ಹೊರತೆಗೆದಿರುವ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ.
ರಾಯದುರ್ಗದ ಶಾಲೆಯೊಂದರಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ತೀವ್ರ ಹೊಟ್ಟೆನೋವು, ವಾಂತಿ ಹಾಗೂ ಗಮನಾರ್ಹ ತೂಕ ಇಳಿಕೆಯಿಂದ ಬಳಲುತ್ತಿದ್ದಳು. ಬಳಿಕ ಆಕೆಯನ್ನು ಅನಂತಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ರಾಮಸ್ವಾಮಿ ನಾಯಕ್ ಅವರ ಪ್ರಕಾರ, ವೈದ್ಯಕೀಯ ಪರೀಕ್ಷೆ ವೇಳೆ ಬಾಲಕಿಗೆ ದೀರ್ಘಕಾಲದಿಂದ ಕೂದಲು ತಿನ್ನುವ ಅಭ್ಯಾಸ ಇರುವುದು ಪತ್ತೆಯಾಗಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ‘ಟ್ರೈಕೊಫೇಜಿಯಾ’ ಎಂದು ಕರೆಯಲಾಗುತ್ತದೆ. ಅಲ್ಲದೆ, ಆಕೆಯಲ್ಲಿ ಅಪರೂಪದ ‘ರಾಪುಂಜೆಲ್ ಸಿಂಡ್ರೋಮ್’ ಕೂಡ ಪತ್ತೆಯಾಗಿದೆ.
ಬಳಿಕ ವೈದ್ಯರ ತಂಡ ಮಂಗಳವಾರ ಶಸ್ತ್ರಚಿಕಿತ್ಸೆ ನಡೆಸಿ ಬಾಲಕಿಯ ಹೊಟ್ಟೆಯಿಂದ ಸುಮಾರು 1.2 ಮೀಟರ್ ಉದ್ದದ ಹಾಗೂ 750 ಗ್ರಾಂ ತೂಕದ ಕೂದಲಿನ ಉಂಡೆಯನ್ನು ಹೊರತೆಗೆದಿದೆ. ಸದ್ಯ ಬಾಲಕಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಟ್ರೈಕೊಫೇಜಿಯಾ ಮತ್ತು ರಾಪುಂಜೆಲ್ ಸಿಂಡ್ರೋಮ್?
ಟ್ರೈಕೊಫೇಜಿಯಾ ಎನ್ನುವುದು ಕೂದಲು ತಿನ್ನುವ ಬಲವಾದ ಪ್ರಚೋದನೆ ಹೊಂದಿರುವ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಈ ಅಭ್ಯಾಸದಿಂದ ನುಂಗಿದ ಕೂದಲು ಹೊಟ್ಟೆಯಲ್ಲಿ ಸಂಗ್ರಹವಾಗಿ ದೊಡ್ಡ ಕೂದಲಿನ ಉಂಡೆಯಾಗಿ ರೂಪುಗೊಳ್ಳಬಹುದು. ಇದನ್ನು ‘ಟ್ರೈಕೊಬೆಜೋರ್’ ಎಂದು ಕರೆಯಲಾಗುತ್ತದೆ.
ಹೊಟ್ಟೆಯಲ್ಲಿ ಸಂಗ್ರಹವಾಗುವ ಕೂದಲು ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆ ಉಂಟುಮಾಡಿ ಹೊಟ್ಟೆನೋವು, ವಾಂತಿ, ಹಸಿವಿನ ಕೊರತೆ ಹಾಗೂ ತೂಕ ಇಳಿಕೆಗೆ ಕಾರಣವಾಗಬಹುದು. ಕೂದಲಿನ ಉಂಡೆ ಹೊಟ್ಟೆಯಿಂದ ಕರುಳಿನವರೆಗೆ ವಿಸ್ತರಿಸುವ ಅಪರೂಪದ ಸ್ಥಿತಿಯನ್ನು ‘ರಾಪುಂಜೆಲ್ ಸಿಂಡ್ರೋಮ್’ ಎಂದು ಕರೆಯಲಾಗುತ್ತದೆ.
ಇಂತಹ ಸಮಸ್ಯೆ ಕಂಡುಬಂದಲ್ಲಿ ವೈದ್ಯಕೀಯ ಚಿಕಿತ್ಸೆ ಹಾಗೂ ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಜೊತೆಗೆ ಮತ್ತೆ ಈ ಅಭ್ಯಾಸ ಮರುಕಳಿಸದಂತೆ ಮಾನಸಿಕ ಆರೋಗ್ಯ ತಜ್ಞರಿಂದ ಚಿಕಿತ್ಸೆ ಪಡೆಯುವುದು ಕೂಡ ಮುಖ್ಯವಾಗಿದೆ.
15 ವರ್ಷದ ಬಾಲಕಿಯ ಹೊಟ್ಟೆಯಿಂದ ಇಷ್ಟೊಂದು ಪ್ರಮಾಣದ ಕೂದಲನ್ನು ಹೊರತೆಗೆದಿರುವ ಘಟನೆ ವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

