ಮಲೆನಾಡಿನಲ್ಲಿ ಮತ್ತೆ ಮಂಗನ ಕಾಯಿಲೆ ಅಬ್ಬರ : 72 ಮಂದಿಗೆ ಸೋಂಕು ದೃಢ!

0
9

ಚಿಕ್ಕಮಗಳೂರು : ಚಳಿಗಾಲದ ಆರಂಭದೊಂದಿಗೆ ಮಲೆನಾಡಿನ ಕಾಡಂಚಿನ ಪ್ರದೇಶಗಳಲ್ಲಿ ಮತ್ತೆ ಮಂಗನ ಕಾಯಿಲೆ (ಕೆಎಫ್‌ಡಿ) ಆತಂಕ ಎದುರಾಗಿದೆ. ಕಾಡು ಮತ್ತು ಕಾಫಿ ತೋಟಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ರೈತರು, ಕಾಫಿ ಬೆಳೆಗಾರರು ಹಾಗೂ ಅರಣ್ಯ ಕಾರ್ಮಿಕರು ವಿಶೇಷ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೂಚನೆ ನೀಡಿದೆ.

ಸಾಮಾನ್ಯವಾಗಿ ನವೆಂಬರ್‌ನಿಂದ ಜೂನ್‌ವರೆಗೆ ಮಂಗನ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಚುರುಕುಗೊಳಿಸಿದೆ.

3,098 ಮಂದಿಗೆ ಪರೀಕ್ಷೆ, 72 ಜನರಿಗೆ ಸೋಂಕು!

ಜಿಲ್ಲಾ ಆರೋಗ್ಯ ಇಲಾಖೆಯ ಮಾಹಿತಿಯ ಪ್ರಕಾರ, 2026ನೇ ಸಾಲಿನಲ್ಲಿ ಈವರೆಗೆ ಒಟ್ಟು 3,098 ಮಂದಿಯನ್ನು ಮಂಗನ ಕಾಯಿಲೆ ಪತ್ತೆಗಾಗಿ ಪರೀಕ್ಷಿಸಲಾಗಿದೆ. ಈ ಪೈಕಿ 72 ಮಂದಿಗೆ ಸೋಂಕು ದೃಢಪಟ್ಟಿದೆ. ಕೊಪ್ಪ ತಾಲೂಕಿನಲ್ಲಿ ಅತಿ ಹೆಚ್ಚು 64 ಪ್ರಕರಣಗಳು ವರದಿಯಾಗಿದ್ದು, ಎನ್.ಆರ್.ಪುರದಲ್ಲಿ 6 ಪ್ರಕರಣಗಳು ಪತ್ತೆಯಾಗಿವೆ. ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಇಬ್ಬರಲ್ಲಿಯೂ ಸೋಂಕು ದೃಢಪಟ್ಟಿದೆ.

ಇದೇ ಅವಧಿಯಲ್ಲಿ ಒಟ್ಟು ಒಂಬತ್ತು ಮಂಗಗಳು ಅಸಹಜವಾಗಿ ಸಾವನ್ನಪ್ಪಿರುವುದು ವರದಿಯಾಗಿದೆ. ಅವುಗಳಲ್ಲಿ ಎಂಟು ಮಂಗಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಅಲ್ಲದೆ, ಸಂಗ್ರಹಿಸಲಾದ 613 ಉಣ್ಣೆಗಳ ಮಾದರಿಗಳ ಪೈಕಿ ಕೆಲವು ಮಾದರಿಗಳು ಪಾಸಿಟಿವ್ ಬಂದಿರುವುದು ಆತಂಕ ಹೆಚ್ಚಿಸಿದೆ.

ನಾಲ್ಕು ತಾಲೂಕುಗಳು ಅತಿ ಸೂಕ್ಷ್ಮ ಪ್ರದೇಶಗಳು

ಚಿಕ್ಕಮಗಳೂರು, ನರಸಿಂಹರಾಜಪುರ, ಕೊಪ್ಪ ಹಾಗೂ ಶೃಂಗೇರಿ ತಾಲೂಕುಗಳನ್ನು ಮಂಗನ ಕಾಯಿಲೆಯ ಅತಿ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಕಾಡಿನಲ್ಲಿ ವಾಸಿಸುವ ಸಣ್ಣ ಸಸ್ತನಿಗಳು ಹಾಗೂ ಮಂಗಗಳ ಮೈಮೇಲೆ ಕಂಡುಬರುವ ‘ಹೇಮಾಫಿಸಾಲಿಸ್ ಸ್ಪಿನಿಗೇರಾ’ ಜಾತಿಯ ಉಣ್ಣೆಗಳು ಈ ವೈರಸ್ ಹರಡುವ ಪ್ರಮುಖ ವಾಹಕಗಳಾಗಿವೆ.

ಸೋಂಕಿತ ಉಣ್ಣೆಗಳು ಮಂಗಗಳಿಗೆ ಕಚ್ಚಿದಾಗ ಅವು ಅನಾರೋಗ್ಯಕ್ಕೆ ಒಳಗಾಗಿ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಮೃತಪಟ್ಟ ಮಂಗಗಳ ದೇಹದಿಂದ ಕೆಳಗೆ ಬೀಳುವ ಸೋಂಕಿತ ಉಣ್ಣೆಗಳು ಕಾಡು ಮತ್ತು ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಚ್ಚುವ ಮೂಲಕ ಮನುಷ್ಯರಿಗೂ ಸೋಂಕು ಹರಡಬಹುದು. ಹೀಗಾಗಿ ಕಾಡಿನಲ್ಲಿ ಮಂಗಗಳು ಅಸಹಜವಾಗಿ ಸಾವನ್ನಪ್ಪಿರುವುದು ಕಂಡುಬಂದರೆ ಅದನ್ನು ನಿರ್ಲಕ್ಷಿಸಬಾರದು ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ.

ಮಂಗನ ಕಾಯಿಲೆಯ ಲಕ್ಷಣಗಳೇನು?

ಸೋಂಕಿತ ಉಣ್ಣೆ ಕಚ್ಚಿದ ಸುಮಾರು 3ರಿಂದ 8 ದಿನಗಳೊಳಗೆ ರೋಗಲಕ್ಷಣಗಳು ಕಾಣಿಸಿಕೊಳ್ಳಬಹುದು.

  • ತೀವ್ರ ಜ್ವರ ಮತ್ತು ತಲೆನೋವು.
  • ಮೈಕೈ ನೋವು, ಕೀಲು ಹಾಗೂ ಸ್ನಾಯುಗಳಲ್ಲಿ ನೋವು.
  • ವಿಪರೀತ ಸುಸ್ತು ಮತ್ತು ವಾಂತಿ.
  • ಕಣ್ಣುಗಳು ಕೆಂಪಾಗುವುದು.
  • ಗಂಭೀರ ಸ್ಥಿತಿಯಲ್ಲಿ ಮೂಗು, ಒಸಡು ಅಥವಾ ಮಲದಲ್ಲಿ ರಕ್ತಸ್ರಾವ.
  • ಕೆಲವರಲ್ಲಿ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಕೆಲವು ರೋಗಿಗಳಲ್ಲಿ ಜ್ವರ ಕಡಿಮೆಯಾದ ಬಳಿಕ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯೂ ಇರುವುದರಿಂದ ನಿರ್ಲಕ್ಷ್ಯ ಮಾಡಬಾರದು.

ಸೋಂಕಿನಿಂದ ರಕ್ಷಿಸಿಕೊಳ್ಳಲು ಈ ಕ್ರಮ ಪಾಲಿಸಿ

ಕಾಡು ಅಥವಾ ಕಾಫಿ ತೋಟಗಳಿಗೆ ತೆರಳುವವರು ಉದ್ದ ತೋಳಿನ ಅಂಗಿ, ಪೂರ್ಣ ಪ್ರಮಾಣದ ಪ್ಯಾಂಟ್ ಹಾಗೂ ಪಾದರಕ್ಷೆಗಳನ್ನು ಕಡ್ಡಾಯವಾಗಿ ಧರಿಸಬೇಕು. ಆರೋಗ್ಯ ಇಲಾಖೆ ಅಥವಾ ವೈದ್ಯರು ಸೂಚಿಸಿದ ಉಣ್ಣೆ ನಿವಾರಕ ದ್ರಾವಣವನ್ನು ಬಳಸಬೇಕು.

ಕಾಡಿನಲ್ಲಿ ಸತ್ತ ಮಂಗಗಳು ಕಂಡುಬಂದರೆ ಅವುಗಳನ್ನು ಮುಟ್ಟಬಾರದು. ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಕಾಡಿನಿಂದ ಮನೆಗೆ ಮರಳಿದ ಬಳಿಕ ದೇಹವನ್ನು ಪರೀಕ್ಷಿಸಿಕೊಂಡು ಸ್ನಾನ ಮಾಡಬೇಕು ಹಾಗೂ ಧರಿಸಿದ್ದ ಬಟ್ಟೆಗಳನ್ನು ಸ್ವಚ್ಛಗೊಳಿಸಬೇಕು.

ಮಂಗನ ಕಾಯಿಲೆಗೆ ನಿರ್ದಿಷ್ಟ ವೈರಸ್ ನಾಶಕ ಚಿಕಿತ್ಸೆ ಇಲ್ಲದಿರುವುದರಿಂದ ಆರಂಭಿಕ ಹಂತದಲ್ಲಿಯೇ ಸೋಂಕು ಪತ್ತೆಹಚ್ಚಿ ಸೂಕ್ತ ವೈದ್ಯಕೀಯ ಆರೈಕೆ ಪಡೆಯುವುದು ಅತ್ಯಂತ ಮುಖ್ಯವಾಗಿದೆ. ಜ್ವರ ಅಥವಾ ಇತರ ಲಕ್ಷಣಗಳು ಕಾಣಿಸಿಕೊಂಡರೆ ಸ್ವಯಂ ಚಿಕಿತ್ಸೆ ಮಾಡಿಕೊಳ್ಳದೆ ತಕ್ಷಣ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು.

ಮಲೆನಾಡಿನ ಜನರು ಭಯಪಡುವ ಬದಲು ಎಚ್ಚರಿಕೆ ವಹಿಸಿ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಮಂಗನ ಕಾಯಿಲೆಯಿಂದ ರಕ್ಷಿಸಿಕೊಳ್ಳಬೇಕಾಗಿದೆ.