ಪಾಂಗಾಳ ಆರ್ಯಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನ.19ರಂದು ನೂತನ ಸಭಾಭವನ ಲೋಕಾರ್ಪಣೆ

0
1

ಕಾಪು: ಪಾಂಗಾಳದ ಆರ್ಯಾಡಿ ಶ್ರೀ ಜನಾರ್ದನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸುಸಜ್ಜಿತ ಹವಾನಿಯಂತ್ರಿತ ‘ಶ್ರೀ ಜನಾರ್ದನ ಸಭಾಭವನ’ದ ಲೋಕಾರ್ಪಣೆ ಕಾರ್ಯಕ್ರಮವು ನವೆಂಬರ್ 19ರ ಗುರುವಾರ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 6.30ರಿಂದ ಶ್ರೀ ದೇವರಿಗೆ ನವಕ ಪ್ರಧಾನ, ಗಣಹೋಮ ಹಾಗೂ ವಾಸ್ತು ಪೂಜೆ ನಡೆಯಲಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ 12.30ಕ್ಕೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.

ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ನೂತನ ಸಭಾಭವನ ಹಾಗೂ ಲಿಫ್ಟ್ ಉದ್ಘಾಟನೆ ನೆರವೇರಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರರಾದ ಡಾ. ಮೋಹನದಾಸ ಭಟ್ ವಹಿಸಲಿದ್ದಾರೆ. ಬೆಂಗಳೂರಿನ ಎಂಆರ್‌ಜಿ ಗ್ರೂಪ್‌ನ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ವೈಭವ್ ವೇದ ಗ್ರೀನ್ ವೆಂಚರ್ಸ್ ಪ್ರೈ.ಲಿ.ಯ ಸಿಎಂಡಿ ಡಾ. ಎಂ. ನವೀನ್ ಕುಮಾರ್, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಜಯರಾಜ್ ಹೆಗ್ಡೆ, ನಿವೃತ್ತ ಬ್ಯಾಂಕ್ ಅಧಿಕಾರಿ ಪಿ. ಶ್ರೀನಿವಾಸ ಭಟ್, ಇನ್ನಂಜೆ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಮಾಲಿನಿ ಶೆಟ್ಟಿ, ಬಾಲಕೃಷ್ಣ ಶೆಟ್ಟಿ ಹಾಗೂ ಗೋವಿಂದ ಶೆಟ್ಟಿ ಭಾಗವಹಿಸಲಿದ್ದಾರೆ.

ರಾತ್ರಿ 7.30ಕ್ಕೆ ತುಳು ಜಾನಪದ ನಾಟಕ ‘ಕಾಡಗಗ್ಗರ’ ಪ್ರದರ್ಶನಗೊಳ್ಳಲಿದೆ.

ಈ ಧಾರ್ಮಿಕ ಹಾಗೂ ಸಭಾ ಕಾರ್ಯಕ್ರಮಗಳಲ್ಲಿ ಊರ ಮತ್ತು ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ವಿನಂತಿಸಿದೆ.