ಡಾ.ಸಂಜೀವ ದಂಡಕೇರಿ ಅವರಿಗೆ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ : ಮೇ 23ರಂದು ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

0
10

ಮಂಗಳೂರು : ಬೆಂಗಳೂರಿನ ಆರ್ಯಭಟ ಕಲ್ಚರಲ್ ಆರ್ಗನೈಸೇಷನ್ ಸಂಸ್ಥೆಯು ರಾಷ್ಟ್ರ – ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಕರಾವಳಿ ಕರ್ನಾಟಕದ ಶ್ರೇಷ್ಠ ನಾಟಕಕಾರ, ತುಳು ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ. ಸಂಜೀವ ದಂಡಕೇರಿ ಅವರು ಆಯ್ಕೆಯಾಗಿದ್ದಾರೆ. ನಾಟಕ ರಂಗದೊಂದಿಗೆ ಡಾ.ದಂಡಕೇರಿಯವರು ಮಾಡಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ

ವೈದ್ಯಕೀಯದಿಂದ ರಂಗಭೂಮಿಗೆ :

ಮೂಲತ: ಆಯುರ್ವೇದ ವೈದ್ಯರಾಗಿರುವ ಡಾ.ಸಂಜೀವ ದಂಡಕೇರಿಯವರು ತುಳು ಭಾಷೆಯಲ್ಲಿ ಸುಮಾರು 20 ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಅವರ ಪ್ರಥಮ ನಾಟಕ ‘ಕಲ್ಪಂದಿ ತಿಮ್ಮೆ’ 1962ರಲ್ಲಿ ರಂಗ ಪ್ರದರ್ಶನಗೊಂಡಿದೆ. ಅವರಿಗೆ ಅಪಾರ ಜನಮನ್ನಣೆ ತಂದುಕೊಟ್ಟ ‘ಬಯ್ಯ ಮಲ್ಲಿಗೆ’ ತುಳು ನಾಟಕ ಕಳೆದ 58 ವರ್ಷಗಳಲ್ಲಿ ದೇಶ – ವಿದೇಶಗಳಲ್ಲಿ ಸುಮಾರು 28 ಸಾವಿರ ಪ್ರದರ್ಶನಗಳನ್ನು ಕಂಡು ಮುನ್ನಡೆಯುತ್ತಿದೆ. ಉಳಿದಂತೆ ಪೊಣ್ಣ ಜನ್ಮ , ಕಾವೇರಿ, ಬೊಲ್ಲಿ ಮೂಡ್ಂಡ್,ಪೂ ಪನ್ನೀರ್, ಪಾದ ಕಾಣಿಕೆ, ಸರಸ್ವತಿ, ಒಂಜೇ ಕರ್ಲ್, ಗಂಗಾ ರಾಮ್ ನೂರಾರು ಪ್ರದರ್ಶನ ಕಂಡ ನಾಟಕಗಳು.

ದಂಡಕೇರಿಯವರ ‘ಬಯ್ಯ ಮಲ್ಲಿಗೆ’ 1975ರಲ್ಲಿ ಚಲನಚಿತ್ರವಾಗಿ ಮಂಗಳೂರಿನ ಜ್ಯೋತಿ ಮತ್ತು ರಾಮಕಾಂತಿ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆಗೊಂಡಿತು. ಜಯರಾಮ್ ಫಿಲಂಸ್ ಅಡಿಯಲ್ಲಿ ನಿರ್ಮಾಣಗೊಂಡ ಈ ತುಳು ಚಿತ್ರದ ಕಥೆ, ಚಿತ್ರಕಥೆ – ಸಂಭಾಷಣೆಗಳನ್ನು ಅವರೇ ಬರೆದಿದ್ದು ಸ್ವತ: ನಟಿಸಿರುವುದು ವಿಶೇಷ. ಮುಂದೆ 1977ರಲ್ಲಿ ‘ಬೊಳ್ಳಿದೋಟ’ ಚಿತ್ರವನ್ನು ನಿರ್ಮಿಸಿ ಕಥೆ,ಚಿತ್ರಕಥೆ – ಸಂಭಾಷಣೆಯೊಂದಿಗೆ ನಟನೆಯನ್ನೂ ಮಾಡಿದ್ದಾರೆ. ‘ಕುಂಕುಮ ಸಾಕ್ಷಿ’ ಚಲನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಅವರದೇ.
ರಂಗಭೂಮಿ ಮತ್ತು ಚಲನಚಿತ್ರಗಳ ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ಡಾ. ದಂಡಕೇರಿಯವರದು ದೊಡ್ಡ ಹೆಸರು. ಅಲ್ಲದೆ ಎರಡು ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರಾಗಿ, ಎಯ್ಯಾಡಿ ರಾಮ ಮಂದಿರ ಹಾಗೂ ನಾರ್ಥ್ ರೋಟರಿ ಕ್ಲಬ್ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿ – ಗೌರವಗಳು :

ನಾಟಕ ರಂಗದ ಸೇವೆಗಾಗಿ ಡಾ. ಸಂಜೀವ ದಂಡಕೇರಿ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (2000), ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2002), ಸರ್.ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ (2004), ಕುವೆಂಪು ವಿಶ್ವ ರತ್ನ ಪ್ರಶಸ್ತಿ (2005), ಬುದ್ಧ ಅಂತಾರಾಷ್ಟ್ರೀಯ ಶಾಂತಿ ಪ್ರಶಸ್ತಿ (2012) ಗಳು ಲಭಿಸಿವೆ. 2005ರಲ್ಲಿ ಸಿಂಗಾಪುರದಲ್ಲಿ ನಡೆದ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಭಾಗವಹಿಸಿ ‘ಗ್ಲೋಬಲ್ ಮ್ಯಾನ್ ಅವಾರ್ಡ್’ ಪಡೆದಿದ್ದಾರೆ. ಮಂಗಳೂರಿನ ಪುರ ಭವನದಲ್ಲಿ ರಂಗ ಮಲ್ಲಿಗೆ (2001), ರಂಗ ಸೌರಭ (2002), ತೌಳವ ಪ್ರಶಸ್ತಿ (2008) ಮತ್ತು ರಂಗ ಚಾವಡಿ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ತುಳು ಸಿನಿಮೋತ್ಸವ 2(018), ವಿಶ್ವ ತುಳುವರೆ ಆಯನೊ (2016) ಮತ್ತು ಮೂಲ್ಕಿ ತುಳು ಸಮ್ಮೇಳನಗಳಲ್ಲಿ ‘ಜೀವಮಾನ ಸಾಧನಾ ಪ್ರಶಸ್ತಿ’ಗಳು ಲಭಿಸಿವೆ. ಇದಲ್ಲದೆ ದೇಶ – ವಿದೇಶದ ವಿವಿಧ ಸಂಘ ಸಂಸ್ಥೆಗಳಿಂದ ನೂರಾರು ಸಮ್ಮಾನ – ಗೌರವಗಳನ್ನು ಅವರು ಪಡೆದಿದ್ದಾರೆ.

ಪ್ರಶಸ್ತಿ ಪ್ರದಾನ :

ಇದೇ ಮೇ ತಿಂಗಳ ತಾರೀಕು 23ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ.ಸಂಜೀವ ದಂಡಕೇರಿಯವರು 2026 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಯನ್ನು ಸ್ವೀಕರಿಸುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here