ಸಾಮಾಜಿಕ ವಲಯದಲ್ಲಿ ವಿಪುಲ ವೃತ್ತಿ ಅವಕಾಶಗಳು: ಶರದ್ ಎಸ್’

0
13

ಉಡುಪಿ : ಸಾಮಾಜಿಕ ವಲಯಗಳಾದ ಸರ್ಕಾರಿ, ಸರ್ಕಾರೇತರ ಸಂಸ್ಥೆಗಳು, ದತ್ತಿ ಸಂಸ್ಥೆಗಳು, ಸಮುದಾಯ ಆಧಾರಿತ ಸಂಘಟನೆಗಳು, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ವಿಭಾಗಗಳು, ನೀತಿ ಸಂಶೋಧನಾ ಸಂಸ್ಥೆಗಳು, ಉದ್ಯಮಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಯುವಜನರಿಗೆ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಬೆಂಗಳೂರಿನ ಅಜೀಂ ಪ್ರೇಂಜಿ ವಿಶ್ವವಿದ್ಯಾಲಯದ ಮಾಜಿ ರಿಜಿಸ್ಟ್ರಾರ್ ಶರದ್ ಎಸ್. ಅಭಿಪ್ರಾಯಪಟ್ಟರು.

ಅಜ್ಜರಕಾಡಿನ ಡಾ. ಜಿ. ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಹಾಗೂ ಉದ್ಯೋಗ ಕೋಶದ ಜಂಟಿ ಆಶ್ರಯದಲ್ಲಿ ಆಯೋಜಿಸಿದ್ದ ‘ಸಾಮಾಜಿಕ ವಲಯದಲ್ಲಿ ವೃತ್ತಿ ಅವಕಾಶಗಳು’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕೌಶಲ್ಯ, ಸಾಮಾಜಿಕ ಬದ್ಧತೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸಮಾಜಮುಖಿ ವೃತ್ತಿಜೀವನ ರೂಪಿಸಿಕೊಳ್ಳಬೇಕು. ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಸಾಮಾಜಿಕ ವಲಯವು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಈ ವಲಯದಲ್ಲಿ ಲಾಭ ಗಳಿಕೆಯ ಉದ್ದೇಶಕ್ಕಿಂತ ಸಾರ್ವಜನಿಕ ಹಿತಾಸಕ್ತಿ ಮತ್ತು ಸಮಾಜದ ಕಲ್ಯಾಣಕ್ಕೆ ಆದ್ಯತೆ ನೀಡುವ ಕ್ಷೇತ್ರವಾಗಿದೆ. ಜೊತೆಗೆ ಸಮಾಜದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ ಎಂದು ಅವರು ಹೇಳಿದರು.

ಮಾನವ ಅಭಿವೃದ್ಧಿ ಸೂಚ್ಯಂಕದ ಪ್ರಮುಖ ಆಯಾಮಗಳಾದ ಆರೋಗ್ಯ, ಶಿಕ್ಷಣ ಮತ್ತು ಉತ್ತಮ ಜೀವನಮಟ್ಟದ ಮಹತ್ವವನ್ನು ವಿವರಿಸಿದ ಅವರು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ ಮತ್ತು ಸಾಮಾಜಿಕ ನ್ಯಾಯದಂತಹ ಕ್ಷೇತ್ರಗಳಲ್ಲಿ ಯುವಜನರಿಗೆ ಹಲವು ರೀತಿಯ ವೃತ್ತಿ ಅವಕಾಶಗಳಿವೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ನಿಕೇತನ ವಹಿಸಿದ್ದರು.

IQAC ಸಂಯೋಜಕಿ ಡಾ. ಅಡಿಗ ಉಪಸ್ಥಿತರಿದ್ದರು. ಉದ್ಯೋಗ ಕೋಶದ ಸಂಯೋಜಕರಾದ ಶರತ್ ಕುಮಾರ್ ಹಾಗೂ ಸಂತೋಷ್ ಪ್ರಭು ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿದರು.

ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.