ಯಕ್ಷಗಾನ ಕಲಾರಂಗದ 106ನೆಯ ಮನೆ ಹಸ್ತಾಂತರ

0
6

ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿ ರೇವಂತ (ಶ್ರೀಮತಿ ಲಕ್ಷ್ಮೀ ಮತ್ತು ಶ್ರೀ ಚಂದ್ರ ನಾಯ್ಕ್ ಪುತ್ರ) ಇವನಿಗೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆಯಲ್ಲಿ, ಅಮೇರಿಕಾದ ಡಾ. ಸುದರ್ಶನ ಮೂರ್ತಿ ಮತ್ತು ಡಾ. ಲಕ್ಷ್ಮೀ ಮೂರ್ತಿ ದಂಪತಿಗಳು ನಿರ್ಮಿಸಿದ ನೂತನ ಮನೆ ‘ಪ್ರಾಣ ವಿಠಲ’ವನ್ನು 29.10.2026ರಂದು ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಉದ್ಘಾಟಿಸಿ ತಮ್ಮ ಅನುಗ್ರಹ ಸಂದೇಶದಲ್ಲಿ ಯಕ್ಷಗಾನ ಕಲಾರಂಗ ಕಾರ್ಯಕರ್ತರ ನಿಸ್ವಾರ್ಥ ದುಡಿಮೆ ಮತ್ತು ವಿಶ್ವಾಸಾರ್ಹತೆಯಿಂದ ದೊಡ್ಡ ಸಾಧನೆ ಮಾಡಿದೆ. ಅವರ ಸಾಮಾಜಿಕ ಕಳಕಳಿ ಎಲ್ಲರಿಗೂ ಅನುಕರಣೀಯ.

ಡಾ. ಸುದರ್ಶನ ಮೂರ್ತಿ ದಂಪತಿಗಳು ಉನ್ನತ ಸ್ಥಾನದಲ್ಲಿದ್ದು ತಮ್ಮ ದೈವ ಭಕ್ತಿ, ಸಾಮಾಜಿಕ ಪ್ರೀತಿಯಿಂದ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು. ಡಾ. ಸುದರ್ಶನ ಮೂರ್ತಿಯವರು ಮಾತನಾಡಿ, ಜನರ ಸೇವೆಯಲ್ಲಿ ಜನಾರ್ದನನ್ನು ಕಾಣುವ ಕಲಾರಂಗದ ಪರಿಚಯವಾದುದು ನಮ್ಮ ಭಾಗ್ಯ. ಇದು ಉಡುಪಿಯ ಕೃಷ್ಣನ ಅನುಗ್ರಹವೇ ಸರಿ. ಸಂಪತ್ತಿನ ಹತ್ತನೇ ಒಂದು ಭಾಗವನ್ನು ಸಮಾಜಕ್ಕೆ ನೀಡುವುದು ನಮ್ಮ ಸಂಕಲ್ಪ ಎಂದರು. ಲಕ್ಷ್ಮೀ ಮೂರ್ತಿಯವರು ಈ ಅವಕಾಶದಿಂದ ನಾವು ಧನ್ಯರಾಗಿದ್ದೇವೆ ಎಂದು ಕನ್ನಡದಲ್ಲಿ ಕೃತಜ್ಞತೆ ಹೇಳಿದರು.

ಯು. ಎಸ್. ರಾಜಗೋಪಾಲ ಆಚಾರ್ಯ, ಎಂ. ಎಸ್. ಶ್ರೀಪಾದ, ಇಂದಿರಾ ಎಸ್. ಮೂರ್ತಿ, ಬಾಲಕೃಷ್ಣ ಹೆಗ್ಡೆ ಅಭ್ಯಾಗತರಾಗಿ ಭಾಗವಹಿಸಿದ್ದರು. ಸಂಸ್ಥೆಯ ಉಪಾಧ್ಯಕ್ಷ ವಿ. ಜಿ. ಶೆಟ್ಟಿ, ಕೋಶಾಧಿಕಾರಿ ಕೆ. ಸದಾಶಿವ ರಾವ್, ಸದಸ್ಯರುಗಳಾದ ಯು. ವಿಶ್ವನಾಥ ಶೆಣೈ, ವಿಜಯ ಕುಮಾರ ಮುದ್ರಾಡಿ, ಭುವನ ಪ್ರಸಾದ ಹೆಗ್ಡೆ, ಸೀತಾರಾಮ ಭಟ್, ಯು. ಅನಂತರಾಜ ಉಪಾಧ್ಯ, ನಟರಾಜ ಉಪಾಧ್ಯಾಯ, ಮರ್ಣೆ ಉಮೇಶ್ ಭಟ್, ಎಲ್ಲೂರು ಗಣೇಶ ರಾವ್, ಆರ್. ವಸಂತ, ಡಾ. ಪ್ರತಿಮಾ ಜೆ. ಆಚಾರ್ಯ, ಸುದರ್ಶನ ಬಾಯರಿ, ಪ್ರಸನ್ನ ಹೆಗಡೆ, ಸಾಮಾಜಿಕ ಕಾರ್ಯಕರ್ತರಾದ ಗಿರೀಶ್ ಉಡುಪ, ನುಕ್ಕೂರು ಮತ್ತು ನಾಲ್ಕೂರಿನ ಸರಕಾರಿ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರುಗಳಾದ ಸುಜಾತ ಮೇಡಂ, ಕೃಷ್ಣ ನಾಯ್ಕ ಮತ್ತು ಅಧ್ಯಾಪಕ ವೃಂದ ಹಾಗೂ ಯಕ್ಷಶಿಕ್ಷಕ ಮಹೇಶ್ ಮಂದಾರ್ತಿ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.