ಆ. 24ರಂದು ಕರಡು ಮತದಾರರ ಪಟ್ಟಿ ಪ್ರಕಟ

0
13

ಉಡುಪಿ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್​ 24 ರಂದು ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಹೇಳಿದರು.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧ ನೋಂದಾಯಿತ ಹಾಗೂ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗಣತಿ ನಮೂನೆಗಳನ್ನು ಮನೆಮನೆಗೆ ತೆರಳಿ ಸಂಗ್ರಹಿಸುವ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಆ. 24 ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ ಮಾಡಲಾಗುವುದು. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ ಒಂದು ಮುದ್ರಿತ ಪ್ರತಿ ಹಾಗೂ ಒಂದು ಸಾಫ್ಟ್​ ಕಾಪಿ ಪಟ್ಟಿಯನ್ನು ನೀಡಲಾಗುವುದು ಎಂದರು .

ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಮೊದಲ ಹಂತ ಮುಗಿದಿದ್ದು, ಜಿಲ್ಲೆಯ ಒಟ್ಟು 10,63,876 ಮತದಾರರ ಪೈಕಿ 10,00,545 ಮತದಾರರ ಗಣತಿ ನಮೂನೆಯನ್ನು ಡಿಜಿಟಲೈಸ್​ ಮಾಡಲಾಗಿದೆ. ಉಳಿದಂತೆ ಎ.ಎಸ್​.ಡಿ.ಡಿ. ಪಟ್ಟಿಯಲ್ಲಿರುವ ಮೃತಪಟ್ಟ 21,262, ಶಾಶ್ವತವಾಗಿ ಸ್ಥಳಾಂತರಗೊಂಡ 29,361, ಗೈರು ಹಾಜರಾದ 4,145, ದ್ವಿಪ್ರತಿಯಲ್ಲಿ ಕಾರ್ಡ್​ ಪಡೆದುಕೊಂಡ 8374 ಹಾಗೂ ಇತರೆ 189 ಮಂದಿ ಮತದಾರರು ಸೇರಿದಂತೆ ಒಟ್ಟು 63,331 ಮತದಾರರು ಮತದಾರರ ಕರಡು ಪಟ್ಟಿಯಿಂದ ಹೊರಗುಳಿಯಲಿದ್ದಾರೆ ಎಂದರು.

ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಾದ್ಯಂತ ಒಟ್ಟು 10,63,876 ಮತದಾರರ ಪೈಕಿ 97,697 ಮತದಾರರು (ಶೇ. 9.18) ವಿಚಾರಣಾ ಹಂತಕ್ಕೆ ಒಳಪಡಲಿದ್ದಾರೆ. ಇವರಿಗೆ ಕನಿಷ್ಠ 7 ದಿನಗಳ ಮುಂಚಿತವಾಗಿ ವಿಚಾರಣೆ ನೋಟೀಸ್​ ಜಾರಿ ಮಾಡಲಾಗುತ್ತದೆ. ಬಿಎಲ್​ಒಗಳು ಮನೆ ಮನೆಗೆ ತೆರಳಿ ನೋಟೀಸ್​ ತಲುಪಿಸಿ, ಸ್ವೀಕೃತಿ ಪಡೆದು, ಸ್ವೀಕರಿಸಿದವರ ಭಾವಚಿತ್ರದೊಂದಿಗೆ ಆ್ಯಪ್​ನಲ್ಲಿ ಅಪ್​ಲೋಡ್​ ಮಾಡಲಿದ್ದಾರೆ. ನಿಗದಿಪಡಿಸಿದ ಸ್ಥಳಗಳಲ್ಲಿ ವಿಚಾರಣೆ ನಡೆಸಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿದ ನಂತರ ಇಆರ್​ಒಗಳು ತೀಮಾರ್ನ ಕೈಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಚಂದ್ರ ಶೇಖರ ಪ್ರಭು, ಜಯರಾಮ್​ ಆಚಾರ್ಯ, ಬಿ. ವಿಜಯಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು.