ಮಂಗಳೂರು : ಮಂಗಳೂರಿನ ಆರ್‌ಡಬ್ಲ್ಯುಎ (RWA) ಅಶೋಕನಗರದಲ್ಲಿರುವ ಅಶೋಕ ಪ್ಯಾರಡೈಸ್ ಅಪಾರ್ಟ್‌ಮೆಂಟ್ ಸಮೀಪದ ಮಳೆನೀರು ಹರಿಯುವ ತೋಡು ಕುಸಿದು ಅಪಾರ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ, ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳೀಯರ ಮನವಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಕುಸಿತದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಅವಲೋಕಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಸ್ಥಳೀಯ ನಿವಾಸಿಗಳ ಪ್ರಕಾರ, ವಿವಿಧ ಪ್ರದೇಶಗಳಿಂದ ಹರಿದುಬರುವ ಮಳೆನೀರು ಒಂದೇ ತೋಡಿಗೆ ಸೇರುವುದರಿಂದ ನೀರಿನ ಒತ್ತಡ ಹೆಚ್ಚಾಗಿ ತೋಡು ಕುಸಿದಿದೆ. ಇದರ ಪರಿಣಾಮವಾಗಿ ಅಶೋಕ ಪ್ಯಾರಡೈಸ್ ಅಪಾರ್ಟ್‌ಮೆಂಟ್‌ನ ಕಾಂಪೌಂಡ್ ಗೋಡೆಗೂ ಹಾನಿ ಉಂಟಾಗಿದ್ದು, ಮತ್ತಷ್ಟು ಮಳೆಯಾದರೆ ಪರಿಸ್ಥಿತಿ ಗಂಭೀರವಾಗುವ ಆತಂಕ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಐವನ್ ಡಿ’ಸೋಜಾ ಅವರು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಇಂಜಿನಿಯರ್‌ಗಳಿಗೆ ತಕ್ಷಣ ತುರ್ತು ಕಾಮಗಾರಿ ಆರಂಭಿಸಿ, ಸ್ಯಾಂಡ್‌ಬ್ಯಾಗ್‌ಗಳನ್ನು ಅಳವಡಿಸುವ ಮೂಲಕ ತಾತ್ಕಾಲಿಕ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಅಲ್ಲದೆ, ತೋಡಿನ ಶಾಶ್ವತ ದುರಸ್ತಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ಯಾವುದೇ ವಿಳಂಬವಿಲ್ಲದೆ ಆರಂಭಿಸುವಂತೆ ಒತ್ತಾಯಿಸಿದ ಅವರು, ಹಾನಿಗೊಳಗಾದ ಪ್ರದೇಶದ ದುರಸ್ತಿಗೆ ಅಗತ್ಯವಿರುವ ವೆಚ್ಚದ ಅಂದಾಜು ವರದಿಯನ್ನು ತಕ್ಷಣ ಸಿದ್ಧಪಡಿಸಿ ಕಾಮಗಾರಿ ಕೈಗೊಳ್ಳುವಂತೆ ಮಹಾನಗರ ಪಾಲಿಕೆ ಇಂಜಿನಿಯರ್‌ಗೆ ನಿರ್ದೇಶನ ನೀಡಿದರು.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತುರ್ತು ಸ್ಪಂದನೆ ನೀಡಿ, ಸಾರ್ವಜನಿಕರ ಜೀವ ಹಾಗೂ ಆಸ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಶೀಘ್ರ ಕೈಗೊಳ್ಳಬೇಕು ಎಂದು ಐವನ್ ಡಿ’ಸೋಜಾ ಆಗ್ರಹಿಸಿದರು.

